ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ವಂಚಿತ, ಜೆಡಿಎಸ್ ಮುಖಂಡ ಮಾಜಿ ಸಚಿವ ಬಿ ಬಿ ನಿಂಗಯ್ಯ ಚುನಾವಣೆ ದಿನಗಣನೆ ಆರಂಭವಾಗುತ್ತಿರುವಾಗಲೇ ಬಿಗ್ ಶಾಕ್ ನೀಡಿದ್ದಾರೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ರಾಜಕೀಯ ಈ ಬಾರಿ ಮ್ಯೂಸಿಕಲ್ ಚೇರ್ ನಂತಾಗಿದೆ. ಜೆಡಿಎಸ್ ಈ ಹಿಂದೆ ತನ್ನ ಮೊದಲನೆಯ ಪಟ್ಟಿಯಲ್ಲಿ ಮೂಡಿಗೆರೆ ಕ್ಷೇತ್ರಕ್ಕೆ ಮಾಜಿ ಶಾಸಕ ಬಿ ಬಿ ನಿಂಗಯ್ಯ ಅವರ ಹೆಸರು ಘೋಷಣೆ ಮಾಡಿತ್ತು. ಬಿಜೆಪಿಯಿಂದ ಹಾಲಿ ಶಾಸಕರಾಗಿದ್ದ ಎಂ ಪಿ ಕುಮಾರಸ್ವಾಮಿ ಅವರಿಗೆ ಟಿಕೆಟ್ ಸಿಗದ ಹಿನ್ನಲೆ ಅವರು ಶಾಸಕ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ನೀಡಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದರು. ಅದಾಗಲೇ ಬಿ ಬಿ ನಿಂಗಯ್ಯ ಅವರಿಗೆ ಘೋಷಣೆಯಾಗಿದ್ದ ಟಿಕೆಟ್ ಅನ್ನು ಜೆಡಿಎಸ್ ಹೈಕಮಾಂಡ್ ಎಂ ಪಿ ಕುಮಾರಸ್ವಾಮಿಗೆ ಘೋಷಿಸಿತ್ತು. ನಾನು ಟಿಕೆಟ್ ಆಕಾಂಕ್ಷಿಯಾಗಿದ್ದು ಜೆಡಿಎಸ್ ಪಕ್ಷದಿಂದಲೇ ನಾಮಪತ್ರ ಸಲ್ಲಿಸುತ್ತೇನೆ ಎಂದು ಬಿಬಿ ನಿಂಗಯ್ಯ ಹೇಳಿದ್ದರು. ಆದರೆ ಜೆಡಿಎಸ್ ಹೈಕಮಾಂಡ್ ತನ್ನ ಅಂತಿಮ ನಿರ್ಧಾರದಲ್ಲಿ ಎಂ ಪಿ ಕುಮಾರಸ್ವಾಮಿ ಹೆಸರು ಘೋಷಿಸಿತ್ತು. ಇದೀಗ ಟಿಕೆಟ್ ವಂಚಿತ ನಿಂಗಯ್ಯ ಈಗ ಜೆಡಿಎಸ್ ಗೆ ಬಿಗ್ ಶಾಕ್ ನೀಡಿದ್ದಾರೆ.
ಇಂದು (28-05-2022) ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ನ್ಯೂಸ್ ಮಲ್ನಾಡ್ ಗೆ ದೊರಕಿದೆ. ಬಿಬಿ ನಿಂಗಯ್ಯ ಪಕ್ಷಕ್ಕೆ ಸೇರ್ಪಡೆ ಸಂಧರ್ಭ ಮಾಜಿ ಮಂತ್ರಿಗಳಾದ ಮೋಟಮ್ಮ, ಜಿಲ್ಲಾಧ್ಯಕ್ಷ ಅಂಶುಮಂತ್ ಸೇರಿದಂತೆ ಹಲವು ಮುಖಂಡರು ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಮೂಡಿಗೆರೆ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಜೆಡಿಎಸ್ ಸೇರ್ಪಡೆಯಾಗುವ ಸುದ್ದಿಯನ್ನು ನ್ಯೂಸ್ ಮಲ್ನಾಡ್ ಮೊದಲು ಬ್ರೇಕ್ ಮಾಡಿತ್ತು.
ಮೂಡಿಗೆರೆ ಕಾಂಗ್ರೆಸ್ ಗೆ ಹೆಚ್ಚಿದ ಬಲ
ಇತ್ತ ಎಂ ಪಿ ಕುಮಾರಸ್ವಾಮಿ ಜೆಡಿಎಸ್ ಸೇರಿದ್ದದೆ, ಜೆಡಿಎಸ್ ನಲ್ಲಿದ್ದ ಬಿಬಿ ನಿಂಗಯ್ಯ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಕಾಂಗ್ರೆಸ್ ಗೆ ಇನ್ನಷ್ಟು ಬಲ ಬಂದಂತಾಗಿದೆ. ಬಿಬಿ ನಿಂಗಯ್ಯ ಹಲವಾರು ವರ್ಷಗಳಿಂದ ಜೆಡಿಎಸ್ ನಲ್ಲಿದ್ದು, ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದವರು. ಈ ಹಿಂದೆ ಮೊದಲ ಪಟ್ಟಿಯಲ್ಲಿ ಇವರ ಹೆಸರು ಘೋಷಣೆಯಾದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಹೆಚ್ಚಾಗಿ ಓಡಾಡುತ್ತಿಲ್ಲ, ಹೀಗೆ ಮುಂದುವರೆದಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡುತ್ತೇನೆ ಎಂದು ಜೆಡಿಎಸ್ ವರಿಷ್ಠ ಹೆಚ್ ಡಿ ಕುಮಾರಸ್ವಾಮಿ ಪಂಚರತ್ನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರಂತೆ. ಇದೀಗ ಬಿ ಬಿ ನಿಂಗಯ್ಯ ಜೆಡಿಎಸ್ ಗೆ ಗುಡ್ ಬೈ ಹೇಳಿದ್ದಾರೆ.