ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಅಮೃತೇಶ್ವರ ಹಳ್ಳಿ ಗ್ರಾಮದ 27 ವರ್ಷದ ಸುರೇಶ್ ಎಂಬಾತ ಬೆಂಗಳೂರಲ್ಲಿ ಕೆಲಸ ಮಾಡಿಕೊಂಡಿದ್ದ. ತಂದೆಗೆ ಕರೆ ಮಾಡಿ ಮನೆಗೆ ಬರುವುದಾಗಿ ತಿಳಿಸಿದ್ದ ಮಗನ ಬರುವಿಕೆಯನ್ನು ನೋಡುತ್ತಾ ಕಾದು ಕುಳಿತ್ತಿದ್ದ ತಂದೆಗೆ ಮೊಬೈಲ್‌ನಲ್ಲಿ ಮಗನ ಶವವನ್ನು ನೋಡಿ ಶಾಕ್ ಆಗಿದ್ದಾರೆ.
ಊರಿನಲ್ಲಿ ಸುರೇಶ ಬರುತ್ತಾನೆಂದು ತಂದೆ ಹಾಗೂ ಅವರ ಕುಟುಂಬದ ಸದಸ್ಯರು ಕಾದುಕೂತಿದ್ದರು ಆದರೇ ಸುರೇಶ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದ ಶಿಂಷಾ ನದಿಯಲ್ಲಿ ಸುರೇಶ್ ಮೃತದೇಹ ಪತ್ತೆಯಾಗಿದೆ. ಮೊದಲು ಮೃತದೇಹ ಯಾರದ್ದೆಂದು ಸ್ಥಳೀಯರಿಗೆ ಗೊತ್ತಾಗಿರಲಿಲ್ಲ. ಹೀಗಾಗಿ ವಾಟ್ಸಾಪ್ ಮೂಲಕ ಮೃತದೇಹದ ಫೋಟೋ ವೈರಲ್ ಮಾಡಿದಾಗ ಕುಟುಂಬಸ್ಥರು ಸುರೇಶ್‌ನ ಗುರುತು ಪತ್ತೆ ಹಚ್ಚಿದ್ದರು.
ಫೋಟೋ ನೋಡಿದ ಮಳವಳ್ಳಿ ತಾಲೂಕಿನ ಅಮೃತೇಶ್ವರ ಹಳ್ಳಿ ಗ್ರಾಮದ ಗ್ರಾಮಸ್ಥರು ಆ ಸ್ಥಳಕ್ಕೆ ಬಂದು ಸತ್ತ ಸುರೇಶ್ ರವರ ಕುತ್ತಿಗೆ ಮತ್ತು ಕಣ್ಣಿನ ಭಾಗದಲ್ಲಿರೋ ಗಾಯದ ಗುರುತನ್ನು ನೋಡಿ ಇದು ಸಹಜ ಸಾವಲ್ಲ ಕೊಲೆ ಎಂದು ಹೇಳಿದ್ದಾರೆ.
ಮೃತ ಸುರೇಶ್ ಅಮೃತೇಶ್ವರ ಹಳ್ಳಿ ಗ್ರಾಮದ ನಾಗೇಗೌಡ ಹಾಗೂ ದುಂಡೀರಮ್ಮ ದಂಪತಿಯ ಮೂರನೇ ಮಗ ಆಗಿದ್ದರು. ಈತ ಕಳೆದ ಹಲವು ವರ್ಷಗಳಿಂದ ಬೆಂಗಳೂರಿನ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದನು. ಆ ಬಾರಿನಲ್ಲಿ ಗಲಾಟೆ ನಡೆದು ಒಂದು ಕೊಲೆ ನಡೆದಿತ್ತು. ಆ ಕೊಲೆ ಕೇಸಿನಲ್ಲಿ ಸುರೇಶ್ ಆರೋಪಿಯಾಗಿದ್ದ ಎಂದು ತಿಳಿದುಬಂದಿದೆ. ಇದಾದ ನಂತರ ಸುರೇಶ್ ಬಾರಿನಲ್ಲಿ ಕೆಲಸ ಬಿಟ್ಟು ಯಶವಂತಪುರದ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದನು. ಕಳೆದ ವರ್ಷ ಕೊರೊನಾ ಹೆಚ್ಚಾಗಿ ಬೆಂಗಳೂರು ಸಂಪೂರ್ಣ ಲಾಕ್ಡೌನ್ ಆದ ನಂತರ ಊರಿಗೆ ಬಂದು ಸೇರಿಕೊಂಡಿದ್ದ.
ಊರಿನಲ್ಲಿಯೇ ಇದ್ದ ಸುರೇಶ್ ಎರಡು ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಹೋಗಿ ಕೆಲಸ ಮಾಡಲಾರಂಭಿಸಿದ್ದ.
ಬೆಂಗಳೂರಿನ ನಂದಿನಿ ಲೇಔಟ್ ನ ರೂಮಿನಲ್ಲಿ ಸ್ನೇಹಿತರ ಜೊತೆ ಇದ್ದಾಗ ರಾತ್ರಿ 10 ಗಂಟೆ ಸುಮಾರಿಗೆ ಸುರೇಶ್ ಮೊಬೈಲಿಗೆ ಕರೆ ಬಂದ ನಂತರ ಹೊರಗೆ ಹೋದ ಸುರೇಶ್ ತನ್ನ ಊರಿನ ಸಮೀಪವಿರುವ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿನ ಶಿಂಷಾ ನದಿಯಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ.
ಆತನ ಪೋನಿಗೆ ಕರೆ ಮಾಡಿ ಹೊರಗೆ ಕರೆದವರೇ ಸುರೇಶ್‌ನನ್ನು ಕೊಲೆ ಮಾಡಿದ್ದಾರೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಅನುಮಾನಾಸ್ಪದ ಸಾವು ಕೇಸ್ ದಾಖಲಿಸಿಕೊಂಡಿರೋ ಕೆ.ಎಂ. ದೊಡ್ಡಿ ಠಾಣೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ತನಿಖೆಯ ನಂತರವಷ್ಟೇ ಸುರೇಶ್ ಸಾವಿನ ರಹಸ್ಯ ಬಯಲಾಗಲಿದೆ.