ನರಸಿಂಹರಾಜಪುರ: (ನ್ಯೂಸ್ ಮಲ್ನಾಡ್ ವರದಿ) ರೈತರಿಗೆ ಕಳಪೆ ಮಟ್ಟದ ರಸಗೊಬ್ಬರವನ್ನು ಪೂರೈಕೆ ಮಾಡಿರುವ ಕುರಿತಾಗಿ ಮತ್ತೊಂದು ಆರೋಪ ಕೃಷಿಕರಿಂದಲೇ ಕೇಳಿ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಹೊನ್ನೇಕೊಡಿಗೆ ಮೂಲದ ನಿವಾಸಿಯೋರ್ವರು ನರಸಿಂಹರಾಜಪುರದ TAPCMS ಶಾಖೆಯಲ್ಲಿ ಕಿಸಾನ್ ಜ್ಯೋತಿ 14:6:21 (Savio bio organic and fertilizers pvt ltd ) ಬ್ರಾಂಡ್ ನ ರಸಗೊಬ್ಬರವನ್ನು 17 ಚೀಲಗಳನ್ನು ಖರೀದಿಸಿ ಅಡಿಕೆಗೆ ಬಳಸಿದ್ದು, ಬೆಳೆಯಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಾರದೇಯಿರುವ ಹಿನ್ನೆಲೆಯಲ್ಲಿ ಕಳಪೆಗೊಬ್ಬರ ಎಂದು ಆರೋಪಿಸಿದ್ದು, ತಕ್ಷಣವೇ ಗೊಬ್ಬರವನ್ನು ಪರೀಕ್ಷೆಗೊಳಪಡಿಸಿ ಕಳಪೆ ಗೊಬ್ಬರವನ್ನು ಸರಬರಾಜು ಮಾಡಿದ ಕಂಪನಿಯ ಮೇಲೆ ಕ್ರಮ ಕೈಗೊಳ್ಳುವಂತೆ ನೊಂದ ಕೃಷಿಕರು ಕೋರಿದ್ದಾರೆ.
ಅತ್ಯಂತ ನಂಬಿಕಾರ್ಹವಾದ ಸೊಸೈಟಿಯಿಂದ ನಾವು ರಸಗೊಬ್ಬರ ಖರೀದಿಸಿದ್ದು, ಗೊಬ್ಬರವನ್ನು ಬಳಸಿದ ಮೇಲೂ ಯಾವುದೇ ಪ್ರಯೋಜನಗಳು ಕಾಣಿಸದ ಹಿನ್ನೆಲೆ ಅಧಿಕಾರಿಗಳಿಗೆ ಈ ಕುರಿತು ತಿಳಿಸಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಗೊಬ್ಬರವನ್ನು ಪರೀಕ್ಷೆಗೊಳಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ಸೂಕ್ತವಾದ ಪರಿಹಾರವನ್ನು ರೈತರಿಗೆ ಒದಗಿಸಬೇಕಿದೆ – ಪ್ರದೀಪ್, ನಷ್ಟಕ್ಕೀಡಾದ ರೈತ.
ಕೆಲವರಿಗೆ ಮಾತ್ರ ಹಣ ವಾಪಸ್ :
ಕಳಪೆ ಅಂಶಗಳಿಂದ ಕೂಡಿದೆ ಎನ್ನಲಾದ Savio bio organic and fertilizers pvt Ltd ಕಂಪನಿಯ ರಸ ಗೊಬ್ಬರವನ್ನು ಖರೀದಿಸಿ ಬಳಸಿದ ಕೆಲ ಕೃಷಿಕರು, ಈ ಕುರಿತಾಗಿ ಸೊಸೈಟಿಯನ್ನು ಸಂಪರ್ಕಿಸಿ ಪ್ರಶ್ನಿಸಿದಾಗ ಕೆಲವರಿಗೆ ಮಾತ್ರ ಹಣವನ್ನು ಸೊಸೈಟಿಯವರು ಹಿಂದಿರುಗಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದ್ದು, ಈ ಭಾಗದ ಬಹುತೇಕ ಕೃಷಿಕರು ನಷ್ಟಕ್ಕೀಡಾಗಿದ್ದು ಸಂಬಂಧಿಸಿದ ಅಧಿಕಾರಗಳು ಈ ಕುರಿತಾಗಿ ಕ್ರಮಕೈಗೊಂಡು ಸೂಕ್ತವಾದ ಪರಿಹಾರವನ್ನು ರೈತರಿಗೆ ದೊರಕಿಸಬೇಕೆಂಬ ಆಗ್ರಹವನ್ನು ಕೃಷಿಕರು ಮುಂದಿಟ್ಟಿದ್ದಾರೆ.
ರೈತರ ಆರೋಪದ ಮೇರೆಗೆ ಅಧಿಕಾರಿಗಳು ಗೊಬ್ಬರದ ಮಾದರಿಯನ್ನು ಸಂಗ್ರಹಿಸಿದ್ದು, ಸರ್ಕಾರವೇ ನೇರವಾಗಿ ಗೊಬ್ಬರವನ್ನು ಸೊಸೈಟಿಗಳಿಗೆ ಕಳುಹಿಸುವುದರಿಂದ ಈ ಕುರಿತು ಲ್ಯಾಬ್ ರಿಪೋರ್ಟ್ ಆಧರಿಸಿಯೇ ನಿರ್ಣಯ ಕೈಗೊಳ್ಳಬೇಕಿದೆ. ಗೊಬ್ಬರ ಖರೀದಿದಾರರು ಈ ಕುರಿತಾಗಿ ಸೊಸೈಟಿಗೆ ಬಂದಾಗ ಅವರಿಗೆ ಬೇರೆ ಗೊಬ್ಬರವನ್ನು ನೀಡುವ ಕೆಲಸ ಸೊಸೈಟಿ ನಡೆಸುತ್ತಿದೆ
– ಕಾಂತರಾಜು, TAPCMS ಕಾರ್ಯದರ್ಶಿ, ನರಸಿಂಹರಾಜಪುರ
ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೆಗ್ಗಾರುಕುಡಿಗೆ ಸೊಸೈಟಿಯಲ್ಲೂ ಗೊಬ್ಬರದಲ್ಲಿ ಕಳಪೆ ಅಂಶಗಳಿವೆ ಎಂದು ರೈತರು ದೂರಿದ್ದಾಗ, ರೈತರಿಗೆ ನ್ಯಾಯ ಒದಗಿಸುವ ಸಲುವಾಗಿ ನ್ಯೂಸ್ ಮಲ್ನಾಡ್ ವಿಸ್ಕೃತ ವರದಿಯನ್ನು ಮಾಡಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಲುಪಿಸಿ ರೈತರಿಗೆ ಪರಿಹಾರ ದೊರೆಯುವಂತೆ ಮಾಡಿತ್ತು. ಈಗಲೂ ರೈತರು ಮಾಡಿರುವ ಆರೋಪವನ್ನು ಸಂಬಂಧಿಸಿದ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಕ್ಕೆ ತೆಗೆದುಕೊಂಡು ಈ ಕುರಿತಾಗಿ ಕ್ರಮ ಹಾಗೂ ಕೃಷಿಕರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು.