ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕಳೆದ ಎರಡು ದಿನದಿಂದ ಜಿಲ್ಲೆಯ ಹಲವೆಡೆ ಸುರಿಯುತ್ತಿರುವ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತತಗೊಂಡಿದ್ದು, ವರುಣರಾಯನ ಆರ್ಭಟಕ್ಕೆ ಎರಡನೇ ಬಲಿಯಾಗಿದೆ.
ಭತ್ತದ ಗದ್ದೆಗೆ ತೆರಳುವಾಗ ಕಾಲು ಜಾರಿ ನದಿಗೆ ಬಿದ್ದು ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿಯಲ್ಲಿ ನಡೆದಿದೆ. ಮೃತಪಟ್ಟವರನ್ನು ದೇವಮ್ಮ (61) ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ದೇವಮ್ಮ ಗದ್ದೆಗೆ ತೆರಳುವಾಗ ದಾರದಹಳ್ಳಿ ಸಮೀಪ ಇರುವ ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದಿದ್ದಾರೆ. ಧಾರಾಕಾರ ಮಳೆಯಿಂದ ತುಂಬಿ ಹರಿಯುತ್ತಿದ್ದ ನೀರಿನ ರಭಸಕ್ಕೆ ದೇವಮ್ಮ ಕೊಚ್ಚಿಹೋಗಿದ್ದಾರೆ.
ಬಳಿಕ ತೇಲಿ ಬರುತ್ತಿದ್ದ ಶವವನ್ನು ಹೇಮವತಿ ನದಿಯ ದಡದಲ್ಲಿ ಸ್ಥಳೀಯರು ಹಾಗೂ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮೇಲಕ್ಕೆತ್ತಿದ್ದಾರೆ.ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.
ಬಳೂರು ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚಾರ್ಮಾಡಿ ಘಾಟ್ ನಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೊರನಾಡು-ಕೊಟ್ಟಿಗೆಹಾರ ಮಧ್ಯದ ಬಾಳೂರು ಎಸ್ಟೇಟ್ ಬಳಿ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರವೊಂದು ಉರುಳಿಬಿದ್ದಿದೆ. ಇದರಿಂದ ಸುಮಾರು ಒಂದು ಗಂಟೆಗಳ ಕಾಲ ಹೊರನಾಡು ರಸ್ತೆ ಸಂಪರ್ಕ ಮೊಟಕುಗೊಂಡಿತ್ತು. ಬಳಿಕ ಮಳೆಯ ಮಧ್ಯೆಯೂ ಸ್ಥಳಕ್ಕೆ ಆಗಮಿಸಿದ ಧರ್ಮಸ್ಥಳ ವಿಪತ್ತು ನಿರ್ವಹಣ ತಂಡವು ಸ್ಥಳೀಯರ ನೆರವಿನಿಂದ ಮರವನ್ನು ತೆರವುಗೊಳಿಸಿದರು.