ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಬುಧವಾರ ಭಾರೀ ಭೂಕುಸಿತ ಸಂಭವಿಸಿದ್ದು, ಅವಶೇಷಗಳ ಅಡಿಯಲ್ಲಿ 40 ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ಇದೆ ಎಂದು ಉಪ ಆಯುಕ್ತ ಅಬಿದ್ ಹುಸೇನ್ ಸಾದಿಕ್ ರವರು ತಿಳಿಸಿದ್ದಾರೆ.
40 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯ(HRTC) ಬಸ್ ಸೇರಿದಂತೆ ಹಲವು ವಾಹನಗಳು ಅವಶೇಷಗಳ ಅಡಿಯಲ್ಲಿ ಸಿಲುಕಿವೆ ಎಂದು ಸಾದಿಕ್‌ರವರು ಹೇಳಿದ್ದಾರೆ.
ಬಸ್ ಕಿನ್ನೌರಿನ ರೆಕಾಂಗ್ ಪಿಯೊದಿಂದ ಶಿಮ್ಲಾಕ್ಕೆ ಹೋಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಸ್ಥಳಕ್ಕೆ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(NDRF) ಮತ್ತು ಸ್ಥಳೀಯ ರಕ್ಷಣಾ ತಂಡಗಳು ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕಿನ್ನೌರ್ ಉಪ ಆಯುಕ್ತರು ತಿಳಿಸಿದ್ದಾರೆ.
ಕಲ್ಲುಗಳು ಇನ್ನೂ ಬೀಳುತ್ತಿವೆ, ದೊಡ್ಡದಾದ ಬಂಡೆ ಕಲ್ಲುಗಳು ಬೀಳುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಸಾದಿಕ್ ಹೇಳಿದ್ದಾರೆ.