ಬಾಗಲಕೋಟೆ: 7 ವರ್ಷದ ಬಾಲಕಿಯನ್ನು ಕಿಡ್ನಾಪ್ ಮಾಡಿ 50 ಲಕ್ಷ ಹಣವನ್ನು ನೀಡುವಂತೆ ಡಿಮ್ಯಾಂಡ್ ಮಾಡಿದ ಘಟನೆ ನವನಗರದ 61 ನೇ ಸೆಕ್ಟರ್ ನಲ್ಲಿ ನಡೆದಿದೆ.
ತಿಪ್ಪಣ್ಣ ಕೊಡಗಾನೂರು ಮತ್ತು ಸುನೀತಾ ದಂಪತಿಯ 7 ವರ್ಷದ ಪುತ್ರಿ ಕೃತಿಕಾಳನ್ನು ಅಪಹರಿಸಿ ಹಣವನ್ನು ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ.
ಬುಧವಾರ ರಾತ್ರಿ ಟ್ಯೂಷನ್ ಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಈ ಕೃತ್ಯಕ್ಕೆ ಆ ಬಾಲಕಿಯರ ಮಾವ ಅನಿಲ್ ಬಾಡಗಂಡಿ ಮತ್ತು ಆತನ ಸ್ನೇಹಿತರೇ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ. ಅನಿಲ್ ಒಬ್ಬ ಜೂಜುಕೋರನಾಗಿದ್ದು ಕೆಲವು ದಿನಗಳ ಹಿಂದೆ ಜೂಜಾಟದಲ್ಲಿ ಸೋತು ಹಣವನ್ನು ಕಳೆದುಕೊಂಡಿದ್ದ ಆದ್ದರಿಂದ ಹಣವನ್ನು ಗಳಿಸಲು ಈ ಕೃತ್ಯ ಎಸಗಿರುವುದಾಗಿ ಶಂಕೆ ವ್ಯಕ್ತವಾಗಿದೆ.
ಬಾಲಕಿ ಟ್ಯೂಷನ್ ಗೆ ತೆರಳಿದ್ದ ವೇಳೆ ಚಾಕಲೇಟ್ ಕೊಡುವ ನೆಪ ಮಾಡಿ ಕಾರಿನಲ್ಲಿ ಬಾಲಕಿಯ ಮಾವ ಅನಿಲ್ ಬಿಹಾರ ಮೂಲದ ನಾಲ್ವರು ಸಹಚರರೊಂದಿಗೆ ಕೃತಿಕಾಳನ್ನು ಅಪಹರಿಸಿದ್ದಾನೆ ಎಂದು ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ. ನಂತರ ಅಪಹರಣಕಾರರು ಬಾಲಕಿಯ ತಂದೆಗೆ ಕರೆ ಮಾಡಿ ಹಿಂದಿಯಲ್ಲಿಯೇ ಮಾತನಾಡಿ ಪೊಲೀಸರಿಗೆ ತಿಳಿಸದೇ ಹೇಳಿದ ಸ್ಥಳಕ್ಕೆ 50 ಲಕ್ಷ ಹಣವನ್ನು ಕೊಡುವಂತೆ ಇಲ್ಲದಿದ್ದರೆ ಮಗುವಿನ ಪ್ರಾಣಕ್ಕೆ ಹಾನಿ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ಬಾಲಕಿಯ ಪೋಷಕರು ಪೊಲೀಸರಿಗೆ ದೂರನ್ನು ನೀಡಿದ್ದಾರೆ.
ಸ್ಥಳೀಯರು ಮತ್ತು ಆ ಬಾಲಕಿಯ ಪೋಷಕರು ನೀಡಿದ ಮಾಹಿತಿಯ ಮೇಲೆ ಪೊಲೀಸರು ದೂರನ್ನು ದಾಖಲಿಸಿಕೊಂಡು ಘಟನೆಯ ನಂತರ ರಾತ್ರಿಯಿಡೀ ಬಾಲಕಿಯ ಹುಡುಕಾಟವನ್ನು ನಡೆಸಿ ತನಿಖೆ ಮುಂದುವರೆಸಿದ್ದಾರೆ.