ವಿಧಾನಸಭಾ ಅಧಿವೇಶನದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಹಿಂದೂಗಳ ಮತಾಂತರ ತಡೆಯಲು ಕಠಿಣ ಕಾಯ್ದೆಗೆ ಒತ್ತಾಯಿಸಿದ್ದ ಕೊಡಗಿನ ವಿರಾಜಪೇಟೆ ಶಾಸಕರಾದ ಕೆ.ಜಿ ಬೋಪಯ್ಯ, ಈಗ ಹಿಂದೂ ದೇವಾಲಯಗಳ ಸಂರಕ್ಷಣೆಗೆ ಹೊಸ ಕಾನೂನಿಗೆ ಒತ್ತಾಯಿಸಿದ್ದಾರೆ.
ವಿರಾಜಪೇಟೆಯ ಶಾಸಕರಾದ ಕೆ.ಜಿ ಬೋಪಯ್ಯ ಅವರು ಪ್ರಸ್ತುತ ಇರುವ ಕರ್ನಾಟಕ ಧಾರ್ಮಿಕ ಕಟ್ಟಡಗಳ ವಿಧೇಯಕ-2021 ವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.
ಮೈಸೂರು ದೇವಸ್ಥಾನ ಧ್ವಂಸದ ವಿವಾದದ ನಂತರ ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕೃತಗೊಂಡ ಕರ್ನಾಟಕ ಧಾರ್ಮಿಕ ಕಟ್ಟಡಗಳ ವಿಧೇಯಕ 2021ದ ಬಗ್ಗೆ ಕಾನೂನು ಸಚಿವರಿಗೆ ಮನವಿ ಮಾಡಿದ್ದು, ಅದರಲ್ಲಿ ಸಾಕಷ್ಟು ನ್ಯೂನತೆಗಳಿದೆ, ಇದರಿಂದ ದೇವಸ್ಥಾನವನ್ನು ರಕ್ಷಣೆ ಮಾಡಲು ಅಸಾಧ್ಯ ಎಂದು ಕೆ.ಜಿ ಬೋಪಯ್ಯ ತಿಳಿಸಿದ್ದಾರೆ. ಹಾಗೂ ಈ ವಿಧೇಯಕವು ಸರ್ವೋಚ್ಚ ನ್ಯಾಯಾಲಯ 2009 ರಲ್ಲಿ ನೀಡಿರುವ ಮಧ್ಯಂತರ ಆದೇಶಕ್ಕೆ ಪೂರಕವಾಗಿಲ್ಲ.
ಈ ಕಾರಣಗಳಿಂದಾಗಿ ಪ್ರಸ್ತುತ ಇರುವ ವಿಧೇಯಕವನ್ನು ಈ ಕೂಡಲೇ ಹಿಂಪಡೆದು, ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ಆದೇಶಕ್ಕೆ ಪೂರಕವಾಗಿ ದೇವಸ್ಥಾನಗಳ ಸಂರಕ್ಷಣೆಗೆ ಅನುಕೂಲವಾಗುವಂತೆ ಹೊಸ ವಿಧೇಯಕವನ್ನು ರಚಿಸಬೇಕೆಂದು ಶಾಸಕರಾದ ಕೆ.ಜಿ ಬೋಪಯ್ಯ ಅವರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ ಮಾಧುಸ್ವಾಮಿ ಅವರಿಗೆ ಒತ್ತಾಯಿಸಿದ್ದಾರೆ.
ವರದಿ : ಸದಾನಂದ ಬೆಂಗಳೂರು.