ತಲಕಾವೇರಿ: ಪೊಲೀಸರು ನವರಾತ್ರಿ ಸಮಯದಲ್ಲಿ ಕೇಸರಿ ಬಣ್ಣದ ಉಡುಗೆ ತೊಟ್ಟಿದ್ದರು ಎಂದು ಕೆಂಡಕಾರಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಜೆಪಿ ಹಿರಿಯ ಮುಖಂಡ ಹಾಗೂ ವಿರಾಜಪೇಟೆ ಶಾಸಕರಾದ ಕೆ,ಜಿ ಬೋಪಯ್ಯ ಟಕ್ಕರ್ ನೀಡಿದ್ದಾರೆ. ಕೇಸರಿ ಬಣ್ಣ ಮತ್ತು ಕಾವಿ ತ್ಯಾಗದ ಸಂಕೇತ ಈ ಬಣ್ಣ ನಮ್ಮ ರಾಷ್ಟ್ರ ದ್ವಜದಲ್ಲಿಯೂ ಇದೆ ದಯವಿಟ್ಟು ಪ್ರಪಂಚವನ್ನು ನಿಮ್ಮ ಕಾಮಾಲೆ ಕಣ್ಣಿನಿಂದ ನೋಡಬೇಡಿ ಎಂದು ಸಿದ್ದರಾಮಯ್ಯ ನವರಿಗೆ ಕೆ. ಜಿ ಬೋಪಯ್ಯ ಹೇಳಿದರು.
ಜೀವನದಿ ಕಾವೇರಿಯ ಉಗಮ ಸ್ಥಳ ಆಗಿರುವಂತಹ ತಲಕಾವೇರಿಯಲ್ಲಿ ಕೆ. ಜಿ. ಬೋಪಯ್ಯ ನವರು ಸಾಧು ಸಂತರೊಡನೆ ಹನ್ನೊಂದನೇ ವರ್ಷದ ತಲಕಾವೇರಿ ಮತ್ತು ಪಂಪುಹಾರ್ ಕಾವೇರಿ ನದಿಯ ಜಾಗೃತಿ ಯಾತ್ರೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
ಮಾನ್ಯ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ನೀವು ಇತ್ತೀಚೆಗೆ ಕೇಸರಿ ಶಾಲು ಹಾಕಿದ ಪೊಲೀಸ್ ಸಿಬ್ಬಂದಿಗಳು ಹಾಗೂ ಅನೇಕ ವ್ಯಕ್ತಿಗಳ ಬಗ್ಗೆ ಕೇವಲವಾಗಿ ಮಾತನಾಡಿದ್ದನ್ನು ನಾವೆಲ್ಲರೂ ಗಮನಿಸಿದ್ದೇವೆ. ಕೇಸರಿ ಮತ್ತು ಕಾವಿ ತ್ಯಾಗದ ಸಂಕೇತವಾದ ಕಾರಣ ಆ ಬಣ್ಣ ನಮ್ಮ ರಾಷ್ಟ್ರ ಧ್ವಜದಲ್ಲಿಯೂ ಇದೆ. ನಮ್ಮ ನಾಡಿನ ಎಲ್ಲಾ ಸಾಧು-ಸಂತರೂ ಮತ್ತು ಶರಣರೂ ಅದೇ ಬಣ್ಣದ ಕಾವಿಯನ್ನು ತೊಡುತ್ತಾರೆ. ಮಾಜಿ ಮುಖ್ಯಮಂತ್ರಿಗಳಾದ ನೀವು ದಯವಿಟ್ಟು ಪ್ರಪಂಚವನ್ನು ನಿಮ್ಮ ಕಾಮಲೆ ಕಣ್ಣುಗಳಿಂದ ನೋಡಬೇಡಿ ಎಂದು ಹೇಳಿದರು.