ಬೆಂಗಳೂರು: ರಾಜ್ಯದೆಲ್ಲೆಡೆ ಕಳೆದ 2 ವಾರಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದ್ದು, ಸೆಪ್ಟೆಂಬರ್ ಅಂತ್ಯದವರೆಗೂ ಮುಂಗಾರು ಮುಂದುವರೆಯಲಿದೆ. ಇಂದಿನಿoದ ಆ. 30 ರವರೆಗೂ ಕರ್ನಾಟಕದಲ್ಲಿ ವರುಣನ ಆರ್ಭಟವು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯವರು ಸೂಚನೆಯನ್ನು ನೀಡಿದ್ದಾರೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಇನ್ನೂ4 ದಿನ ಮಳೆಯ ಅಬ್ಬರ ಹೆಚ್ಚಾಗುವುದರಿಂದ ಹಳದಿ ಅಲರ್ಟ್ ಘೋಷಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಮಳೆ ಹೆಚ್ಚಾಗಿದೆ. . ಶಿವಮೊಗ್ಗ, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಕೋಲಾರ ಈ ಜಿಲ್ಲೆಗಳಲ್ಲಿ ಇಂದಿನಿoದ 4 ದಿನ ಹೆಚ್ಚು ಮಳೆಯಾಗಲಿದೆ.ಕಳೆದ ಮೂರ್ನಾಲ್ಕು ದಿನಗಳಿಂದ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದೆ. ಇಂದು ಕರಾವಳಿ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದೆ.
ಆ. 28 ಮತ್ತು29 ರಂದು ಕರ್ನಾಟಕದ 13 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿತ್ತು. ಆದರೆ, ಆಗಸ್ಟ್ನಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಕಳೆದೆರಡು ತಿಂಗಳಿಗೆ ಹೋಲಿಸಿದರೆ ಮಳೆಯ ಪ್ರಮಾಣ ಇಳಿಮುಖವಾಗಿದೆ. ಕರ್ನಾಟಕದಲ್ಲಿ ಇಂದು ಮತ್ತು ನಾಳೆ ಕೂಡ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಬೀದರ್, ರಾಯಚೂರು, ಧಾರವಾಡ, ಹಾವೇರಿ, ಗದಗ, ಬಳ್ಳಾರಿ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಕಳೆದ ವರ್ಷಕ್ಕಿಂತಲೂ ಹೆಚ್ಚು ಮಳೆಯಾಗಿದೆ. ಈ ಜಿಲ್ಲೆಗಳಲ್ಲಿ ಇನ್ನೆರಡು ದಿನ ಸಾಧಾರಣ ಮಳೆಯಾಗಲಿದೆ. ಇಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಇನ್ನೆರಡು ದಿನ ಮಳೆಯಾಗಲಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.