Friday, June 9, 2023
Homeರಾಜ್ಯಗ್ರಾಮೀಣ ಭಾಗದ 1.5 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ ; ಆತಂಕಕಾರಿ ವರದಿ ಬಹಿರಂಗ ಪಡಿಸಿದ...

ಗ್ರಾಮೀಣ ಭಾಗದ 1.5 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ ; ಆತಂಕಕಾರಿ ವರದಿ ಬಹಿರಂಗ ಪಡಿಸಿದ ಸಮೀಕ್ಷೆ

ಬೆಂಗಳೂರು: ರಾಜ್ಯದಲ್ಲಿ ಗ್ರಾಮೀಣ ಬಾಗದಲ್ಲಿರುವಂತಹ 1.5 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಡೆಸಿರುವಂತಹ ಸಮೀಕ್ಷಾ ವರದಿಯು ಬಹಿರಂಗಪಡಿಸಿದೆ

ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ವಿಚಾರವಾಗಿ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡಿದ್ದು, ಈ ವಿಚಾರವನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠವು ಜುಲೈ 28 ಬುಧವಾರ ದಂದು ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹಿರಿಯ ವಕೀಲ ಕೆ.ಎನ್. ಫಣೀಂದ್ರ ವರದಿ ಸಲ್ಲಿಸಿದ್ದು, ಸಮೀಕ್ಷಾ ವರದಿ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

“ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಮನೆ ಮನೆ ಸಮೀಕ್ಷೆ ನಡೆಸಲಾಗಿದೆ ಅದರಲ್ಲಿ ನಗರ ಪ್ರದೇಶಗಳಲ್ಲಿರುವಂತಹ 12,28,052 ಮಕ್ಕಳನ್ನು ಸಮೀಕ್ಷೆ ನಡೆಸಲಾಗಿದೆ. ಅದರಲ್ಲಿ 6 ರಿಂದ 18 ವರ್ಷದೊಳಗಿನ 9,25,820 ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಇದೇ ವಯೋಮಾನದಲ್ಲಿರುವಂತಹ 8,718ಮಕ್ಕಳು ಶಾಲೆಗೆ ಹೋಗುತ್ತಿಲ್ಲ. 4,842 ಮಕ್ಕಳು ಶಾಲೆಗೆ ದಾಖಲಾತಿಯೇ ಮಾಡಿಕೊಂಡು ಬಂದಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದಾರೆ”

“ಗ್ರಾಮೀಣ ಭಾಗದಲ್ಲಿ ಒಟ್ಟು 34,55,656 ಮಕ್ಕಳ ಸಮೀಕ್ಷೆ ನಡೆಸಿ ಗುರುತಿಸಲಾಗಿದೆ. ಅದರಲ್ಲಿ 6 ರಿಂದ 18 ವರ್ಷದೊಳಗಿನ 32,14,257 ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಇದೇ ವಯೋಮಾನದ ಒಟ್ಟು 33,344 ಮಕ್ಕಳು ಶಾಲೆಗೆ ಹೋಗುತ್ತಿಲ್ಲ. 9,716 ಮಕ್ಕಳು ಶಾಲೆಗೆ ದಾಖಲಾತಿಯೇ ಪಡೆದಿಲ್ಲ. 3 ವರ್ಷಕ್ಕಿಂತ ಕಡಿಮೆ ವಯಸ್ಸಿನ 72,194 ಮಕ್ಕಳು ಶಾಲೆಗೆ ಹೋಗುತ್ತಿಲ್ಲ. 3 ರಿಂದ 6 ವರ್ಷದೊಳಗೆ ಇರುವಂತಹ 1,26,245ಮಕ್ಕಳು ಶಾಲೆಗೆ ಹೋಗುತ್ತಿಲ್ಲ ಎಂದು ವರದಿಯಲ್ಲಿ ವಿವರಿಸಿದ್ದಾರೆ”

ಆ ವರದಿಯನ್ನು ಪರಿಶೀಲಿಸಿದಂತಹ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ, ಸರ್ವೇ ನಡೆಸುವ ವಿಚಾರಕ್ಕೆ ಉತ್ತರಿಸುವಂತೆ ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿತು. ಹಾಗೆಯೇ, ಕೂಡಲೇ ಮನೆ ಮನೆ ಸರ್ವೇ ನಡೆಸುವಂತೆ ಬಿಬಿಎಂಪಿಗೆ ಸೂಚನೆ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದರು.

ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಲು ಮನೆ ಮನೆ ಸಮೀಕ್ಷೆ ನಡೆಸುವಂತೆ ಸರ್ಕಾರಕ್ಕೆ ಹೈಕೋರ್ಟ್ 2020ರ ಮಾ.16 ರಂದು ಆದೇಶವನ್ನು ನೀಡಿತ್ತು. ಅದರಂತೆ ಸಮೀಕ್ಷೆ ನಡೆಸಲಾಗಿತ್ತು ಆದರೂ ಅದಕ್ಕೆ ಅನುಸರಿಸಿದ ಮಾನದಂಡಗಳ ವಿವರಗಳನ್ನು ತಿಳಿಸಿರಲಿಲ್ಲ. ಇದರಿಂದ ಸಮೀಕ್ಷೆಯ ವರದಿ ಹಾಗೂ ದಾಖಲೆಗಳ ಪರಿಶೀಲನೆಗಾಗಿ ಪ್ರಕರಣದ ಅಮಿಕಸ್ ಕ್ಯೂರಿ ಹಾಗೂ ಇತರ ವಕೀಲರೊಂದಿಗೆ ಸಭೆ ನಡೆಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ 2021ರ ಜೂ.23ರಂದು ನಿರ್ದೇಶಿಸಿತ್ತು.

ಅದರಂತೆ ರಾಜ್ಯ ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಅವರ ನೇತೃತ್ವದಲ್ಲಿ ಇದೇ ಜು.8ರಂದು ನಡೆದ ಸಭೆಯಲ್ಲಿ ಸಂಬಂಧಿಸಿದ ಎಲ್ಲ ವಕೀಲರು ಮತ್ತು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಸಮೀಕ್ಷೆ ಬಗ್ಗೆ ಅಧಿಕಾರಿಗಳು ವಿವರಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ

Most Popular

Recent Comments