Thursday, June 8, 2023
Homeಇತರೆಈ ಕೂಡಲೇ ಶಾಲೆಗಳನ್ನು ಆರಂಭಿಸಿ: ಮುಖ್ಯಮಂತ್ರಿಗಳಿಗೆ ಡೆಡ್ ಲೈನ್ ನೀಡಿದ ಖಾಸಗೀ ಶಾಲೆಗಳ ಒಕ್ಕೂಟ.

ಈ ಕೂಡಲೇ ಶಾಲೆಗಳನ್ನು ಆರಂಭಿಸಿ: ಮುಖ್ಯಮಂತ್ರಿಗಳಿಗೆ ಡೆಡ್ ಲೈನ್ ನೀಡಿದ ಖಾಸಗೀ ಶಾಲೆಗಳ ಒಕ್ಕೂಟ.

ಬೆಂಗಳೂರು: ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಲಾಕ್‌ಡೌನ್ ಜಾರಿಯಾದ ನಂತರ ಶಾಲೆಗಳನ್ನ ಬಂದ್ ಮಾಡಲಾಗಿದೆ.

ಸದ್ಯ ಈಗ ಕೊರೊನಾ ನಿಯಂತ್ರಣಕ್ಕೆ ಬಂದ ಕಾರಣ ಲಾಕ್‌ಡೌನ್ ತೆರವುಗೊಳಿಸಲಾಗಿದೆ. ಆದರೆ ಬಂದ್ ಆಗಿರುವಂತಹ ಶಾಲೆಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಮಕ್ಕಳ ಆರೋಗ್ಯದ ಹಿತಾದೃಷ್ಟಿಯಿಂದ ಶಾಲೆಗಳನ್ನು ತೆರೆಯಲು ಸರ್ಕಾರ ಮುಂದಾಗುತ್ತಿಲ್ಲ. ಆದರೆ ಕೂಡಲೇ ಶಾಲೆಗಳನ್ನು ಆರಂಭಿಸಬೇಕು ಎಂದು ಖಾಸಗಿ ಶಾಲೆಗಳ ಒಕ್ಕೂಟ ನೂತನ ಮುಖ್ಯಮಂತ್ರಿಗೆ ಡೆಡ್‌ಲೈನ್ ನೀಡಿದೆ.

ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ಕೊರೊನಾ ಮೂರನೇ ಅಲೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳುತ್ತಿದ್ದಾರೆ, ಮೂರನೇ ಅಲೆ ಮಕ್ಕಳ ಮೇಲೆ ಅತಿಯಾಗಿ ಪರಿಣಾಮ ಬೀರುತ್ತದೆ ಎಂದು ಸಹ ಹೇಳಲಾಗುತ್ತಿದೆ. ಹೀಗಾಗಿ ಸರ್ಕಾರವು ಶಾಲೆಗಳನ್ನು ತೆರೆಯಲು ಹಿಂದೇಟು ಹಾಕುತ್ತಿದೆ.

ಆದರೆ ಖಾಸಗಿ ಶಾಲೆಗಳ ಒಕ್ಕೂಟವು ಕೂಡಲೇ ಶಾಲೆಗಳನ್ನು ಆರಂಭಿಸಬೇಕು ಎಂದು ರಾಜ್ಯದ ನೂತನ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಡೆಡ್‌ಲೈನ್ ನೀಡಿದೆ. ನೀವು ಶಾಲೆಯನ್ನು ತೆರೆಸದಿದ್ದರೆ ಆಗಸ್ಟ್ 2 ರಿಂದ ನಾವೇ ಶಾಲೆಗಳನ್ನು ತೆರೆಯುತ್ತೇವೆ ಎಂದು ಎಚ್ಚರಿಕೆ ನೀಡಿದೆ.

ಸರ್ಕಾರ ಶಾಲೆ ಆರಂಭಕ್ಕೆ ಸೂಚಿಸದಿದ್ದರೆ ನಾವೇ ಆರಂಭಿಸುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ರೂಪ್ಸಾ ಸಂಘಟನೆ ಶಾಕ್ ಕೊಟ್ಟಿದೆ. ಜುಲೈ 30 ರೊಳಗೆ ಶಾಲೆಗಳನ್ನು ಆರಂಭ ಮಾಡಬೇಕು ಅಂತ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರಾಗಿರುವಂತಹ ಹಾಲನೂರು ಲೇಪಾಕ್ಷಿ ಯವರು ಡೆಡ್‌ಲೈನ್ ನೀಡಿದ್ದಾರೆ.

ಶೇ.80 ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಐಸಿಎಂಸಿ, ದೇವಿಶೆಟ್ಟಿ ವರದಿ ಹಾಗೂ ಟಾಸ್ಕ್ ಫೋರ್ಸ್ ಸಭೆ ಕೂಡ ಗ್ರೀನ್ ಸಿಗ್ನಲ್ ನೀಡಿದೆ.

ಹಾಗೂ ಗುಜರಾತ್, ತೆಲಂಗಾಣ, ಆಂಧ್ರ, ಒರಿಸ್ಸಾ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಶಾಲೆ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಶಾಲೆಯನ್ನು ತೆರೆಯಲು ಸರ್ಕಾರವು ಮೀನಾಮೇಷ ಎಣಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Most Popular

Recent Comments