ಮಂಗಳೂರು: ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತ್ ವಿರುದ್ಧ ಜಿಲ್ಲಾಧಿಕಾರಿ ನೀಡಿದ್ದ ದೂರನ್ನು ವಾಪಾಸ್ ತೆಗೆದುಕೊಳ್ಳಬೇಕೆಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
ಗಣಿಗಾರಿಕೆಯನ್ನು ನಿಲ್ಲಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಎಚ್ಚರಿಸಿದ್ದ ಕಾರಂತರ ವಿರುದ್ಧ ಜಿಲ್ಲಾಧಿಕಾರಿ ರಾಜೇಂದ್ರ ಕೆ. ವಿ ಪೊಲೀಸರಿಗೆ ದೂರನ್ನು ನೀಡಿದ್ದರು. ಈ ವಿಚಾರವಾಗಿ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವೇದಿಕೆಯ ಮುಖಂಡರು, ಕಾರಂತರ ವಿರುದ್ಧ ನೀಡಿರುವ ದೂರನ್ನು ಹಿಂಪಡೆದುಕೊಳ್ಳಬೇಕು ಇಂತಹ ಸಾವಿರಾರು ಕೇಸ್ ಗಳನ್ನು ಎದುರಿಸಲು ಹಿಂದೂ ಜಾಗರಣ ವೇದಿಕೆ ಸಿದ್ದವಿದೆ ಎಂದರು.
ಜಗದೀಶ್ ಕಾರಂತ್ ಸುಮಾರು 45 ವರ್ಷಗಳಿಂದಲೂ ಸಂಘಟನೆಯಲ್ಲಿ ಭಾಗವಹಿಸುತ್ತಿದ್ದಾರೆ, ಅವರು ಇಡೀ ಜೀವನವನ್ನು ಸಂಘಟನೆಗಾಗಿ ಮೀಸಲಿಟ್ಟಿದ್ದಾರೆ. ಇಂತಹ ನೂರಾರು ಕೇಸ್ ಗಳನ್ನು ಕಾರಂತರು ಕಂಡಿದ್ದಾರೆ, ಜಿಲ್ಲಾಧಿಕಾರಿ ಕೇಸ್ ಹಾಕಿರುವುದು ದೊಡ್ಡ ವಿಷಯವಲ್ಲ. ಕ್ಷೇತ್ರದಲ್ಲಿ ಅನ್ಯ ಮತೀಯರಿಂದ ಆಗುತ್ತಿರುವ ಅಹಿತಕರ ಘಟನೆ ಮತ್ತು ಗಣಿಗಾರಿಕೆಯ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಮುಚ್ಚಿ ಹಾಕುವ ಸಲುವಾಗಿ ಜಿಲ್ಲಾಧಿಕಾರಿ ಕೇಸ್ ಹಾಕಿದ್ದಾರೆ ಎಂದು ಆರೋಪಿಸಿದರು.
ಕಳೆದ 14 ವರ್ಷಗಳಿಂದ ಕಾರಿಂಜಾ ಕ್ಷೇತ್ರದಲ್ಲಿ ಗಣಿಗಾರಿಕೆ ನಿಲ್ಲಿಸಲು ಹೋರಾಟ ಮಾಡುತ್ತಿದ್ದೇವೆ. ಗಣಿಗಾರಿಕೆಯಿಂದಾಗಿ ಈಗಾಗಲೇ ಸ್ಥಳದಲ್ಲಿ ಬಿರುಕು ಮೂಡಿದ್ದು ಸ್ಥಳೀಯ 32 ಗ್ರಾಮಗಳಿಗೆ ಅಪಾಯ ಎದುರಾಗಲಿದೆ ಇಂತಹ ಗಂಭಿರ ಸ್ಥಿತಿಯನ್ನು ಜಿಲ್ಲಾಧಿಕಾರಿ ಅರ್ಥ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ದೂರನ್ನು ನೀಡಿದ ಬಳಿಕ ದೇವಸ್ಥಾನದಲ್ಲಿರುವ ಭಗವಾದ್ವಜ ವನ್ನು ತೆಗೆಯಲು ಪೂಂಜಾಲಕಟ್ಟೆ ಠಾಣೆಯ ಎಸ್ ಐ ಸೌಮ್ಯ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಮುಖಂಡರು ಪೊಲೀಸರು ದ್ವಜವನ್ನು ತೆಗೆದರೆ ನಮ್ಮ ಸಾಮರ್ಥ್ಯದ ಪ್ರದರ್ಶನ ಮಾಡಬೇಕಾಗುತ್ತದೆ, ತಾಕತ್ ಇದ್ದರೆ ಭಗವಾದ್ವಜವನ್ನು ತೆಗೆದುಹಾಕಿ ಒಂದು ವಾರದೊಳಗೆ ಸಾವಿರ ಭಗವಾದ್ವಜವನ್ನು ಹಾಕುತ್ತೇವೆ, ಜಾಸ್ತಿ ಹಿಂದುಗಳನ್ನು ತುಳಿಯುವುದಕ್ಕೆ ನೋಡಬೇಡಿ ಎಂದು ಎಚ್ಚರಿಕೆ ನೀಡಿದರು.