ಕಡೂರು: (ನ್ಯೂಸ್ ಮಲ್ನಾಡ್ ವರದಿ) ಸರ್ಕಾರಿ ಜಾಗವನ್ನು ಅಕ್ರಮವಾಗಿ ವ್ಯಕ್ತಿಯೊಬ್ಬರಿಗೆ ಖಾತೆ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನಲೆಯಲ್ಲಿ ಕಡೂರು ತಾಲ್ಲೂಕಿನ ಬೀರೂರು ಹೋಬಳಿಯ ಅಂದಿನ ಕಂದಾಯ ನಿರೀಕ್ಷರಾಗಿದ್ದ ಕಿರಣ್‌ಕುಮಾರ್ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಕೆ. ಎನ್ ರಮೇಶ್ ಆದೇಶ ಹೊರಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಕಡೂರು ತಹಶೀಲ್ದಾರ್ ಜೆ.ಉಮೇಶ್ ಹಾಗೂ ಆಗಿನ ಶಿರಸ್ತೇದಾರ್ ನಂಜುಂಡಯ್ಯ (ಹಾಲಿ ನಿವೃತ್ತ) ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಡೂರು ತಾಲ್ಲೂಕಿನ ಬೀರೂರು ಹೋಬಳಿಯ ಉಳ್ಳಿನಾಗೂರು ಗ್ರಾಮದ ಸರ್ವೆ ನಂಬರ್ 43ರ 5.04 ಎಕರೆ ಸರ್ಕಾರಿ ಬೀಳು ಜಾಗವನ್ನು ಅಕ್ರಮವಾಗಿ ಹನುಮಣ್ಣ ಎಂಬವರಿಗೆ ಖಾತೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತರೀಕೆರೆ ಉಪವಿಭಾಗಾಧಿಕಾರಿ ಪರಿಶೀಲನೆ ವರದಿ ನೀಡಿದ್ದಾರೆ. ಅಕ್ರಮವಾಗಿ ಖಾತೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖ ಇದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶದಲ್ಲಿ ತಿಳಿಸಿದ್ದಾರೆ. ಕಿರಣ್ ಕುಮಾರ್ ಕಡೂರು ತಾಲ್ಲೂಕು ಕಚೇರಿಯಲ್ಲಿ ನಿಯೋಜನೆಯಡಿ ಕಾರ್ಯನಿರ್ವಹಣೆ ಹಾಲಿ ಎಸ್‌ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ವಿನಯ್ ಗುರೂಜಿ ಹೆಸರಲ್ಲಿ ಫೇಕ್ ಅಕೌಂಟ್ ಮಾಡಿ ಹಣಕ್ಕೆ ಬೆದರಿಕೆ
ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಸಾಮಾಜಿಕ ಜಾಲತಾಣದಲ್ಲಿ ಕೊಪ್ಪ ಮೂಲದ ವಿನಯ್ ಗುರೂಜಿ ಹೆಸರಲ್ಲಿ ಫೇಕ್ ಅಕೌಂಟ್ ಸೃಷ್ಟಿ ಮಾಡಿ ಹಣಕ್ಕಾಗಿ ಬೇಡಿಕೆ ಇಡಲಾಗುತ್ತಿದೆ. ಕೆಲ ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದು ಇದು ಹೊಸದೇನಲ್ಲ. ಈ ಕಿಡಿಗೇಡಿಗಳು ಯಾರೆಂದು ಪತ್ತೆ ಹಚ್ಚುವಲ್ಲಿ ಸೈಬರ್ ಕ್ರೈಂ ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ.
ಅಲ್ಲದೆ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಸಂದೇಶಗಳನ್ನು ರವಾನಿಸುತ್ತಿದ್ದಾರೆ ಎನ್ನುವ ಆರೋಪಗಳು ಕೂಡ ಕೇಳಿಬಂದಿವೆ. ಕಿಡಿಗೇಡಿಗಳು ಮೆಸೆಂಜರ್, ಫೇಸ್‌ಬುಕ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಭಯ ಹುಟ್ಟಿಸುವಂತಹ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಭಯ ಹುಟ್ಟಿಸಿ ಹಣ ವಸೂಲಿಗೂ ಇಳಿದಿದ್ದಾರೆ. 45 ದಿನದೊಳಗೆ ನಿಮಗೆ ಗಂಡಾತರ ಕಾದಿದೆ ಅನ್ನುವ ರೀತಿ ಮೆಸೇಜ್ ಮಾಡುವ ಮೂಲಕ ಜನರಿಗೆ ಭಯ ಹುಟ್ಟಿಸುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.
ಆಶ್ರಮದಿಂದ ಸ್ಪಷ್ಟನೆ, ಕಾನೂನು ಕ್ರಮಕ್ಕೆ ಮುಂದಾದ ಸಿಬ್ಬಂದಿ
ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿನಯ್ ಗುರೂಜಿ ಹೆಸರಲ್ಲಿ ಫೇಕ್ ಅಕೌಂಟ್ ಸೃಷ್ಟಿ ಮಾಡಿ ಹಣಕ್ಕಾಗಿ ಬೇಡಿಕೆ ಇಡಲಾಗುತ್ತಿದೆ. ಕಿಡಿಗೇಡಿಗಳು ಭಯ ಹುಟ್ಟಿಸುವ ರೀತಿ ಮೆಸೇಜ್ಗಳನ್ನು ಮಾಡಿ ಹಣ ಸುಲಿಗೆಗೆ ಮುಂದಾಗಿದ್ದಾರೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಆಶ್ರಮದ ಸಿಬ್ಬಂದಿ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಾಗೂ ಆಶ್ರಮಕ್ಕೂ ಈ ಅಕೌಂಟ್ಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದೆಡೆ ಈ ರೀತಿಯ ಘಟನೆಗಳು ಹೆಚ್ಚಾಗುತ್ತಿದ್ದು ಫೇಕ್ ಅಕೌಂಟ್ ನಿಂದ ಹಣ ಕೇಳಿದ್ರೆ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.