ತುಮಕೂರು: ತನಿಖೆಯ ನೆಪದಲ್ಲಿ ಪೊಲೀಸರು ಕಿರುಕುಳವನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ಚಿನ್ನದ ಅಂಗಡಿ ಹಾಗೂ ಗಿರವಿ ಅಂಗಡಿ ಮಾಲೀಕರು ಸೋಮವಾರ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಚಿನ್ನದ ಅಂಗಡಿ ಮಾಲೀಕರನ್ನು ಕಳ್ಳರಂತೆ ಪೊಲೀಸರು ನೋಡುತ್ತಿದ್ದಾರೆ. ತನಿಖೆ ಹೆಸರಿನಲ್ಲಿ ಪ್ರತಿನಿತ್ಯ ಅಂಗಡಿಗೆ ಬಂದು ಹಿಂಸೆಯನ್ನು ನೀಡುತ್ತಿದ್ದಾರೆ. ಯಾವ ತಪ್ಪು ಮಾಡದಿದ್ದರೂ ಬೆದರಿಸಿ, ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಕಳ್ಳರಂತೆ ಖಾಸಗಿ ವಾಹನಗಳಲ್ಲಿ ಕೆರೆದುಕೊಂಡು ಹೋಗುತ್ತಿದ್ದಾರೆ. ದಿನದಿಂದ ದಿನಕ್ಕೆ ಹಿಂಸೆ ನೀಡುವುದು ಹೆಚ್ಚಾಗಿದೆ. ಏನಾದರೂ ಮಾತನಾಡಿದರೆ ಕೇಸು ದಾಖಲಿಸುವುದಾಗಿ ಬೆದರಿಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಾರೆ ಎಂದು ಆಕ್ರೋಶಗೊಂಡರು.
ಬೆಂಗಳೂರಿನ ಎಚ್‌ಎಸ್‌ಆರ್ ಪೊಲೀಸ್ ಠಾಣೆ ಸಿಬ್ಬಂದಿ ಏಕಾಏಕಿ ಚಿನ್ನದ ಅಂಗಡಿಗೆ ಬಂದು ಮಾಲೀಕರನ್ನು ಕಳ್ಳರಂತೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಹೋಗಿದ್ದು ಚಿನ್ನದ ವ್ಯಾಪಾರಿಗಳು ಆಕ್ರೋಶಗೊಳ್ಳಲು ಕಾರಣವಾಗಿದೆ.
ಹೊರ ಜಿಲ್ಲೆಗಳಿಂದ ಬರುವ ಪೊಲೀಸರು ಸ್ಥಳೀಯ ಪೊಲೀಸರಿಗೆ ಮಾಹಿತಿಯನ್ನು ನೀಡದೆ ದಾಳಿ ನಡೆಸುತ್ತಾರೆ. ಆರೋಪಿಗಳ ಹೆಸರಿನಲ್ಲಿ ಕೆಲವರನ್ನು ಕರೆತಂದು ಯಾವುದೇ ದಾಖಲೆಗಳು ಇಲ್ಲದಿದ್ದರೂ ಚಿನ್ನ, ಒಡವೆ ನೀಡುವಂತೆ ಒತ್ತಾಯಿಸುತ್ತಾರೆ. ಕದ್ದ ಒಡವೆಗಳನ್ನು ತೆಗೆದುಕೊಂಡಿದ್ದೀರಿ ಅವುಗಳನ್ನು ವಶಪಡಿಸಿಕೊಳ್ಳಲು ಬಂದಿದ್ದೇವೆ ಎನ್ನುತ್ತಾರೆ. ಆದರೆ ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಇರುವುದಿಲ್ಲ. ಆದರೂ ಒಡವೆ, ಇಲ್ಲವೆ ಹಣವನ್ನು ಪೊಲೀಸರಿಗೆ ನೀಡಬೇಕಾಗಿದೆ ಎಂದು ಚಿನ್ನದಂಗಡಿ ಮಾಲೀಕರಾದ ಜೆ.ಪಿ.ಜೈನ್ ಆರೋಪಿಸಿದರು.
ಇಂತಹ ಕಿರುಕುಳದ ನಡುವೆ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ ಹಾಗಾಗಿ ನಮ್ಮ ಅಂಗಡಿಗಳನ್ನು ಮುಚ್ಚಿ, ಬೀಗದ ಕೀಗಳನ್ನು ಪೊಲೀಸರಿಗೆ ನೀಡಿದ್ದೇವೆ. ಪೊಲೀಸರೇ ಒಂದು ನಿರ್ಧಾರ ಕೈಗೊಳ್ಳಲಿ ಎಂದು ಅಂಗಡಿ ಮಾಲೀಕರು ಅಸಮಾಧಾನ ಹೊರ ಹಾಕಿದರು.
ಈ ಬಗ್ಗೆ ಪೊಲೀಸರಿಗೆ ಸಾಕಷ್ಟು ಬಾರಿ ಮನವಿಯನ್ನು ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವು ಪ್ರಕರಣಗಳಲ್ಲಿ ಒಂದು ಲಕ್ಷದವರೆಗೂ ಹಣವನ್ನು ವಸೂಲಿ ಮಾಡುತ್ತಾರೆ. ಇಂತಹ ವ್ಯವಸ್ಥೆಯಲ್ಲಿ ವ್ಯಾಪಾರ ಮಾಡುವುದು ಕಷ್ಟಕರ ಎಂದು ಮಾಲೀಕರು ಅಸಹಾಯಕತೆಯನ್ನು ವ್ಯಕ್ತಪಡಿಸಿದರು