Tuesday, November 28, 2023
Homeಸುದ್ದಿಗಳುದೇಶಭಾರತೀಯರು ಅಫ್ಘಾನಿಸ್ತಾನವನ್ನು ತೊರೆಯುವಂತೆ ಸಲಹೆ ನೀಡಿ ವಿಶೇಷ ವಿಮಾನವನ್ನು ಕಳುಹಿಸಿದ ಭಾರತ.

ಭಾರತೀಯರು ಅಫ್ಘಾನಿಸ್ತಾನವನ್ನು ತೊರೆಯುವಂತೆ ಸಲಹೆ ನೀಡಿ ವಿಶೇಷ ವಿಮಾನವನ್ನು ಕಳುಹಿಸಿದ ಭಾರತ.

ಕಾಬೂಲ್: ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯರು ಇಂದೇ ವಿಶೇಷ ವಿಮಾನದಲ್ಲಿ ಭಾರತಕ್ಕೆ ಮರಳುವಂತೆ ಭಾರತ ಸರ್ಕಾರ ಮನವಿಯನ್ನು ಮಾಡಿದೆ. ಆಫ್ಘನ್ ಭದ್ರತಾ ಪಡೆಗಳು ಮತ್ತು ತಾಲಿಬಾನ್ ಮಧ್ಯೆ ಭೀಕರ ಕಾಳಗ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ಸಲಹೆಯನ್ನು ನೀಡಿದೆ.

ತಾಲಿಬಾನ್ ಬಂಡುಕೋರರ ದೃಷ್ಟಿ ಅಫ್ಘಾನಿಸ್ತಾನದ ನಾಲ್ಕನೇ ಅತಿ ದೊಡ್ಡ ನಗರವಾದ ಮಝರ್ ಇ ಶರೀಫ್ ಮೇಲೆ ಬಿದ್ದಿರುವ ಬೆನ್ನಲ್ಲೇ ಭಾರತ ತನ್ನ ಪ್ರಜೆಗಳ ಸ್ಥಳಾಂತರಕ್ಕೆ ವಿಶೇಷ ವಿಮಾನದ ಏರ್ಪಾಡು ಮಾಡಿರುವುದು ಗಮನಾರ್ಹವಾಗಿದೆ.

ಸೋಮವಾರವಷ್ಟೇ ತಾನು ಮಝರ್ ಇ ಶರೀಫ್ ನಗರವನ್ನು ವಶಪಡಿಸಿಕೊಳ್ಳಲು ಮುಂದಾಗುವುದಾಗಿ ತಾಲಿಬಾನ್ ಪ್ರಕಟಣೆಯನ್ನು ಹೊರಡಿಸಿತ್ತು. ಆಫ್ಘನ್ ಸರ್ಕಾರದ ವಶದಲ್ಲಿರುವ ಪ್ರದೇಶಗಳಲ್ಲಿ ಮಝರ್ ಇ ಶರೀಫ್ ಪ್ರಮುಖವಾದುದೆಂದು ಹೇಳಲಾಗುತ್ತಿದೆ. ಹೀಗಾಗಿ ಸಹಜವಾಗಿ ತಾಲಿಬಾನ್ ವಕ್ರದೃಷ್ಟಿ ಅದರ ಮೇಲೆ ಬಿದ್ದಿದೆ. ಅದನ್ನು ವಶಪಡಿಸಿಕೊಂಡಲ್ಲಿ ಆಫ್ಹ್ಘನ್ ಸರ್ಕಾರಕ್ಕೆ ತೀವ್ರ ಮುಖಭಂಗವಾಗಲಿದೆ ಎನ್ನುವುದು ತಾಲಿಬಾನ್ ಅಭಿಪ್ರಾಯವಾಗಿದೆ. ರಾಜಕೀಯ ಪರಿಣತರು ಕೂಡಾ ಅದಕ್ಕೆ ಸಹಮತವನ್ನು ವ್ಯಕ್ತಪಡಿಸಿದ್ದಾರೆ.

ಇಂದು ಭಾರತೀಯರ ಸ್ಥಳಾಂತರಕ್ಕೆ ನಿಯೋಜಿಸಲಾಗಿರುವ ವಿಮಾನವು ಮಝರ್ ಇ ಶರೀಫ್ ನಗರದಿಂದ ಇಂದು ಹೊರಡಲಿದೆ. ಈ ಬಗ್ಗೆ ಮಝರ್ ಇ ಶರೀಫ್ ನಗರದಲ್ಲಿನ ಭಾರತೀಯ ದೂತವಾಸ ಕಚೇರಿ ಟ್ವೀಟ್ ಮಾಡಿದ್ದು, ಅಲ್ಲಿಂದ ಹೊರಡಲಿಚ್ಛಿಸುವ ಭಾರತೀಯರು ಆದಷ್ಟು ಬೇಗನೆ ತಮ್ಮ ಹಾಗೂ ಕುಟುಂಬದ ವಿವರಗಳನ್ನು ನೀಡುವಂತೆ ಸೂಚನೆಯನ್ನು ನೀಡಿದೆ.

 

 

Most Popular

Recent Comments