ನವದೆಹಲಿ: ಭಯೋತ್ಪಾದನೆ ದಾಳಿ ಬೆದರಿಕೆಯ ಹಿನ್ನೆಲೆಯಲ್ಲಿ ದೆಹಲಿ ಸೇರಿದಂತೆ ದೇಶಾದಾದ್ಯಂತ ಬಿಗಿ ರಕ್ಷಣಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.
ದೆಹಲಿಯಲ್ಲಿ ಪೊಲೀಸ್ ಆಯುಕ್ತರು ನಿರಂತರವಾಗಿ ಸಭೆಗಳನ್ನು ನಡೆಸಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದ್ದಾರೆ. ಈ ನಡುವೆ ಜಮ್ಮು-ಕಾಶ್ಮಿರದ ಗಡಿ ಭಾಗದಲ್ಲಿ ನೆರೆಯ ರಾಷ್ಟ್ರದಿಂದ ಡ್ರೋಣ್ ದಾಳಿಯನ್ನು ನಡೆಸುವ ಪ್ರಯತ್ನಗಳು ನಡೆದಿದ್ದು, ಹಲವಾರು ಬಾರಿ ವಿಫಲಗೊಳಿಸಲಾಗಿದೆ. ಅದರ ಬೆನ್ನಲ್ಲೆ ದೇಶದ ನಾನಾ ಭಾಗಗಳಲ್ಲಿ ರಾಷ್ಟ್ರೀಯ ತನಿಖಾ ದಳ ದಾಳಿಯನ್ನು ನಡೆಸಿದ್ದು, ಶಂಕಿತ ಭಯೋತ್ಪಾದಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದೆ.
ಈ ನಡುವೆ ಐಸ್ಸಿಸ್ ಮತ್ತು ಕೆಲವು ನಿಷೇಧಿತ ಉಗ್ರ ಸಂಘಟನೆಗಳಿಗೆ ದೇಶಿಯ ಯುವಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅವರಿಂದ ಸ್ವತಂತ್ರ‍್ಯ ದಿನಾಚರಣೆಯ ವೇಳೆ ವಿಧ್ವಂಸಕ ಕೃತ್ಯವನ್ನು ನಡೆಸಲು ಸಂಚು ರೂಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ ಹೀಗಾಗಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಎಲ್ಲೆಡೆ ತಪಾಸಣಾ ಕಾರ್ಯಗಳನ್ನು ಚುರುಕುಗೊಳಿಸಲಾಗಿದೆ. ಡ್ರೋಣ್, ಲಘು ವಿಮಾನ, ಬಿಸಿಗಾಳಿಯ ಬಲೂನ್‌ಗಳು, ಪ್ಯಾರಚೂಟ್ ಬಳಕೆಗೆ ಕಠಿಣ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ.
ಬಾಂಬ್ ನಿಷ್ಕ್ರೀಯ ದಳಗಳು, ಶ್ವಾನ ದಳಗಳು ಎಲ್ಲೆಡೆ ಶೋಧ ಕಾರ್ಯಚರಣೆಯನ್ನು ನಡೆಸಿವೆ. ಗಡಿ ಭಾಗದಲ್ಲಿ ಕಟ್ಟೆಚರವಹಿಸಲಾಗಿದೆ. ಸಂಭವನೀಯ ಉಗ್ರರ ದಾಳಿಯನ್ನು ಹಿಮ್ಮೆಟಿಸುವುದು, ಶಾಂತಿ ಮತ್ತು ಸುರಕ್ಷತೆಯಿಂದ ಸ್ವತಂತ್ರ‍್ಯ ದಿನಾಚರಣೆ ಆಚರಿಸಲು ಮುನ್ನೆಚ್ಚರಿಕೆವಹಿಸಲಾಗಿದೆ. ಈ ನಡುವೆ ಗಣರಾಜ್ಯೋತ್ಸವದ ದಿನದಂದು ರೈತರ ಪ್ರತಿಭಟನೆಯ ನಡುವೆ ಖಾಲಿಸ್ತಾನಿಗಳು ನುಸುಳಿ ಅಹಿತಕರ ಘಟನೆಗಳು ನಡೆದಿದ್ದವು. ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಸಿಕ್ ಸಮುದಾಯದ ನಿಶಾನ್ ಸಾಹಿಬ್ ಧ್ವಜಾರೋಹಣ ಮಾಡಲಾಗಿತ್ತು.
ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಈ ಬಾರಿ ಸ್ವತಂತ್ರ‍್ಯ ದಿನಾಚರಣೆಯ ವೇಳೆ ಮತ್ತೆ ರೈತರು ದೆಹಲಿಯತ್ತ ಪ್ರತಿಭಟನೆಗಾಗಿ ಆಗಮಿಸುತ್ತಿದ್ದಾರೆ. ಈ ವೇಳೆ ಮತ್ತೆ ಖಾಲಿಸ್ತಾನಿಗಳು ನುಸುಳಬಹುದು ಎಂಬ ಗುಪ್ತಚರ ಮಾಹಿತಿಯನ್ನು ಇದೆ. 75ನೇ ಸ್ವತಂತ್ರ‍್ಯ ದಿನಾಚರಣೆ ಅಮೃತ ಮಹೋತ್ಸವದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.