Monday, December 11, 2023
Homeಇತರೆಅಕ್ರಮ ಮರಳು ಸಾಗಾಣಿಕೆ : ವಾಹನ ನಿಲ್ಲಿಸಲು ಸೂಚಿಸಿದ ಪೋಲೀಸರ ಮೇಲೆಯೇ ಲಾರಿಯನ್ನು ಹತ್ತಿಸಲು ಯತ್ನಿಸಿದ...

ಅಕ್ರಮ ಮರಳು ಸಾಗಾಣಿಕೆ : ವಾಹನ ನಿಲ್ಲಿಸಲು ಸೂಚಿಸಿದ ಪೋಲೀಸರ ಮೇಲೆಯೇ ಲಾರಿಯನ್ನು ಹತ್ತಿಸಲು ಯತ್ನಿಸಿದ ದುಷ್ಕರ್ಮಿಗಳು

ಮಂಗಳೂರು: ಅಕ್ರಮ ಮರಳುಗಾರಿಕೆಯ ತಪಾಸಣೆ ನಡೆಸುವ ವೇಳೆ ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಲಾರಿಯನ್ನು ಹತ್ತಿಸಲು ಯತ್ನಿಸಿದ ಘಟನೆ ಬುಧವಾರ ನಸುಕಿನ ಜಾವ ನಗರದಲ್ಲಿ ನಡೆದಿದೆ.

ಟಿಪ್ಪರ್ ಲಾರಿ ಚಾಲಕ ಅಬ್ದುಲ್ ಇಸಾಕ್, ಆಲ್ಟೋ ಕಾರು ಚಾಲಕ ಮೊಯಿದ್ದೀನ್ ಅಪ್ಸರ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಬಂದ ಖಚಿತ ಮಾಹಿತಿಯ ಆಧಾರದ ಮೇರೆಗೆ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ನಸುಕಿನ ಜಾವ ಅಡ್ಯಾರ್ ಸಮೀಪದ ಕಾಲೇಜಿನ ಬಳಿ ವಾಹನ ತಪಾಸಣೆಯನ್ನು ನಡೆಸುತ್ತಿದ್ದರು. ನಸುಕಿನ ಜಾವ 2:30ರ ಸುಮಾರಿಗೆ ಅಡ್ಯಾರ್ ಸಮೀಪದ ನೇತ್ರಾವತಿ ನದಿ ಹಾಗೂ ಮರಳು ಧಕ್ಕೆ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ-73 ಕಡೆಗೆ ಟಿಪ್ಪರ್ ಲಾರಿಯೊಂದು ಬರುತ್ತಿತ್ತು. ವಾಹನವನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದರು. ಈ ವೇಳೆಗೆ ಟಿಪ್ಪರ್ ಲಾರಿಯ ಹಿಂಬದಿಯಿಂದ ಆಲ್ಟೋ ಕಾರೊಂದು ಬಂದಿದ್ದು, ಅದರಲ್ಲಿನ ದುಷ್ಕರ್ಮಿಗಳು ಟಿಪ್ಪರ್ ಲಾರಿಯನ್ನು ನಿಲ್ಲಿಸದಂತೆ ಟಿಪ್ಪರ್ ಲಾರಿ ಚಾಲಕನಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಪೊಲೀಸ್ ಅಧಿಕಾರಿಗಳ ಸೂಚನೆಯನ್ನು ಧಿಕ್ಕರಿಸಿ, ಫರಂಗಿಪೇಟೆ ಕಡೆಯ ರಸ್ತೆಯಲ್ಲಿ ವಾಹನ ಚಲಾಯಿಸಿಕೊಂಡು ತೆರಳಿದರು. ಈ ವಾಹನಗಳನ್ನು ಬೆನ್ನಟ್ಟಿದರೂ ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋಗಿ ತಪ್ಪಿಸಿಕೊಂಡಿದ್ದರು.

ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರ ಸಹಕಾರದೊಂದಿಗೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಪ್ರಕರಣದಲ್ಲಿ ಟಿಪ್ಪರ್ ಲಾರಿ, ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.ಆರೋಪಿಗಳ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಎರಡು ಠಾಣೆಗಳಲ್ಲಿಯೂ ಪ್ರಕರಣ ದಾಖಲಾಗಿದೆ.

Most Popular

Recent Comments