ಮೂಡಿಗೆರೆ/ಸಕಲೇಶಪುರ: (ನ್ಯೂಸ್ ಮಲ್ನಾಡ್ ವರದಿ) ನಮ್ಮ ಮನೆಯ ಬಳಿ ಜಿಹಾದಿಗಳು ಬಂದ್ರೆ ನಮ್ಮ ಮನೆಯಲ್ಲಿರುವ ಕೋವಿಗಳು ಹೊರಗೆ ಬರುತ್ತವೆ. ಹೀಗೆಂದು ಸಕಲೇಶಪುರದ ಹಿಂದೂಪರ ಸಂಘಟನೆ ಮುಖಂಡ ಹೇಳಿಕೆ ನೀಡಿದ್ದರು ಈ ಪ್ರಕರಣ ದಾಖಲಾಗುತ್ತಿದ್ದಂತೆ ರಘು ಸಕಲೇಶಪುರ ನಾಪತ್ತೆಯಾಗಿದ್ದರು. ಈ ಸಂಬಂಧ ಬಿಜೆಪಿ ಮುಖಂಡ ಅವಿನಾಶ್ ಎಂಬುವವರನ್ನು ವಿಚಾರಣೆ ನೆಪದಲ್ಲಿ ಪೊಲೀಸರು ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಏನಿದು ಘಟನೆ?
‘ನಮ್ಮ ಮನೆಯ ಬಳಿ ಜಿಹಾದಿಗಳು ಬಂದ್ರೆ ನಮ್ಮ ಮನೆಯಲ್ಲಿರುವ ಕೋವಿಗಳು ಹೊರಗೆ ಬರುತ್ತವೆ’ ಹೀಗೆಂದು ಸಕಲೇಶಪುರದ ಹಿಂದೂಪರ ಸಂಘಟನೆ ಮುಖಂಡ ರಘು ಸಕಲೇಶಪುರ ಹೇಳಿಕೆ ನೀಡಿದ್ದರು. ಜೂನ್ 27ರಂದು ನಡೆದ ಪ್ರತಿಭಟನೆ ಒಂದನ್ನು ಉದ್ದೇಶಿಸಿ ಮಾತನಾಡಿದ ರಘು ’ನಾವು ಗುಂಡನ್ನ ಹಾರಿಸೇ ಹಾರಿಸ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಚಾಮನಳ್ಳಿ ಗ್ರಾಮದ ತೋಟದೊಳಗೆ ಪ್ರವೇಶಿಸಿ ಲೈಸೆನ್ಸ್ ಇಲ್ಲದ ಕೋವಿ ತೆಗೆದುಕೊಂಡು ಮಾಲೀಕನ ಎದುರೇ ಗೋವು ಕೊಲ್ಲಲಾಗಿದೆ. ಇಂದು ನಾವು ಯಾವ ಪರಿಸ್ಥಿತಿಯಲ್ಲಿ ಇದ್ದೇವೆ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ನಮ್ಮ ಮನೆಯ ಹತ್ತಿರ ಯಾವುದೇ ಜಿಹಾದಿಗಳು ಬಂದರೆ, ತೋಟದಲ್ಲಿರುವ ಕೋವಿಗಳು ಹೊರ ಬರುತ್ತವೆ ಎಂದು ಹೇಳಿದ್ದರು.
ನಮ್ಮ ಹಿಂದೂಗಳ ಮನೆಯ ಹತ್ತಿರ ಬರುವ ಮೀನು, ತರಕಾರಿ ವ್ಯಾಪಾರಿಗಳು ಎಚ್ಚರಿಕೆಯಿಂದಿರಬೇಕು. ನಮ್ಮ ಮನೆ ಹತ್ರ ಬಂದರೆ ತೋಟದ ಕೋವಿಗಳಿಂದ ನಾವು ಸಹ ಗುಂಡು ಹಾರಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈ ಸಂಬಂಧ ರಘು ಸಕಲೇಶಪುರ, ಎಲ್ಲಿದ್ದಾನೆ ಹೇಳು ಎಂದು ವಿಚಾರಣೆ ನೆಪದಲ್ಲಿ ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ಮೇಲೆ ಪೊಲೀಸರು ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಹಿಂದುಪರ ಸಂಘಟನೆಗಳು ಅರೋಪಿಸಿವೆ.
ಅವಿನಾಶ್ ಮೇಲೆ ತೀವ್ರ ಹಲ್ಲೆ:
ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ನನ್ನು ಸಕಲೇಶಪುರ ಠಾಣೆಗೆ ಕರೆದೊಯ್ದು ತೀವ್ರ ಹಲ್ಲೆ ನಡೆಸಿ ತಲೆ, ಕಿವಿ ಸೇರಿದಂತೆ ಕೈಗೆ ತೀವ್ರ ಗಾಯಗಳಾಗಿದ್ದು ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವಿನಾಶ್, ಮೊನ್ನೆ ಸಕಲೇಶಪುರದಿಂದ ಪೊಲೀಸರು ಬಂದು ರಾತ್ರಿ ಯಾವುದೇ ವಾರೆಂಟ್ ಇಲ್ಲದೆ 10 ರಿಂದ 15 ಪೊಲೀಸರು ಬಂದು ನನ್ನನ್ನ ಅರೆಸ್ಟ್ ಮಾಡಿ ಸಕಲೇಶಪುರಕ್ಕೆ ಕರೆದುಕೊಂಡು ಬಂದರು. ಮೊನ್ನೆ ಕರೆದುಕೊಂಡು ಹೋದವನನ್ನು ನಿನ್ನೆ 5 ಗಂಟೆಯವರೆಗೆ ಪೊಲೀಸ್ ಠಾಣೆಯಲ್ಲಿ ಇದ್ದೆ. ಮಾನಸಿಕವಾಗಿ ದೈಹಿಕವಾಗಿ ಹಲ್ಲೆ ಮಾಡಿ ನನ್ನ ಮೊಬೈಲ್ ಕೂಡ ಪುಡಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಡಿ.ವೈ.ಎಸ್.ಪಿ. ಅಮಾನತ್ತಿಗೆ ಆಗ್ರಹ:
ಇನ್ನು ಅವಿನಾಶ್ ಮೇಲಿನ ಹಲ್ಲೆ ಖಂಡಿಸಿ, ಸಕಲೇಶಪುರ ಡಿ.ವೈ.ಎಸ್.ಪಿ ಮಿಥುನ್ ಅಮಾನತ್ತಿಗೆ ಆಗ್ರಹಿಸಿದ್ದಾರೆ. DySP ಮಿಥುನ್ ಅವರು ಹೇಳು ಹೇಳು ಅಂತ ಬಲವಂತ ಮಾಡಿದ್ದರು. ಸರ್ಕಾರದಿಂದ ನನಗೆ ಒತ್ತಡವಿದೆ, ಮುಖ್ಯ ಮಂತ್ರಿ ಗೃಹ ಇಲಾಖೆಯಿಂದ ಒತ್ತಡ ಇದೆ ಹೇಳು ನೀನು ಅಂತ ನನಗೆ ಒತ್ತಡ ಹಾಕಿದ್ದರು. ಆದರೆ ನನಗೆ ಏನು ಸತ್ಯ ಗೊತ್ತಿರುವುದು ಹೇಳಿದ್ದೀನಿ. ನನಗೆ ಚಿತ್ರ ಹಿಂಸೆ ನೀಡಿದರು.
ರಾತ್ರಿ ಎಲ್ಲಾ ನನಗೆ ಅವಾಚ್ಯ ಶಬ್ದಗಳಿಂದ ಮನೆ ವಿಚಾರ ನನ್ನ ವೈಯಕ್ತಿಕ ವಿಚಾರ ಎಲ್ಲಾ ಹೇಳಿ ನಿಂದಿಸಿದ್ದರು. ಹಾಗೇ ರಾತ್ರಿ ಹಾಡು ಹೇಳು, ನಾಡಗೀತೆ ಹೇಳು ರಾಷ್ಟ್ರಗೀತೆ ಹೇಳು ಅಂತ ಪೊಲೀಸ್ ಭಯಕ್ಕೆ ನಾನು ಹೇಳುವ ಪರಿಸ್ಥಿತಿ ಬಂತು ಎಂದು ಹೇಳಿದ್ದಾರೆ.
ಹಲ್ಲೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ:
ಅವಿನಾಶ್ ಮೇಲಿನ ಹಲ್ಲೆ ಖಂಡಿಸಿ, ಬಿಜೆಪಿಯಿಂದ 1000 ಕ್ಕೂ ಹೆಚ್ಚು ಜನ ಸೇರಿ ಇಂದು ಮಧ್ಯಾಹ್ನ ಮೂಡಿಗೆರೆಯಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹಿಂದುಪರ ಸಂಘಟನೆಗಳು ಹೇಳಿಕೆ ನೀಡಿವೆ.