ಬೀದರ್: ರಾಜ್ಯಾದ್ಯಂತ ಗಾಳಿ ಸಮೇತ ಮಳೆಯಿಂದಾಗಿ ಅನೇಕ ಸಾವು-ನೋವು ಉಂಟಾಗುತ್ತಿದೆ
ಅದೇ ರೀತಿ ಬೀದರ್‌ನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮನೆಯ ಛಾವಣಿ ಕುಸಿತವಾಗಿದ್ದು ಈ ದುರ್ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.
ಮಂಗಳವಾರ ತಡರಾತ್ರಿ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲ್ಲೂಕಿನ ಚಿಂಚೋಳಿ ಗ್ರಾಮದಲ್ಲಿ ವೈಜಿನಾಥ್ ಅವರ ಮನೆಯ ಛಾವಣಿಯ ಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಹಾಗೆಯೇ ಘಟನೆಯಲ್ಲಿ 3 ಮಂದಿ ಗಾಯಗೊಂಡಿದ್ದು, ಮೃತರನ್ನು ವೈಜಿನಾಥ್ ವಡ್ಡಾರ್ ಅವರ ಪತ್ನಿ ಪಾರ್ವತಿ (35) ಎಂದು ಗುರುತಿಸಲಾಗಿದೆ.
ಕಳೆದ 3 ದಿನಗಳಿಂದ ಗ್ರಾಮದಲ್ಲಿ ನಿರಂತರ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಕುಸಿದಿದೆ. ಛಾವಣಿ ಕುಸಿತದ ವೇಳೆ ಮನೆಯಲ್ಲಿ ಪತಿ ವೈಜಿನಾಥ್ ವಡ್ಡಾರ್, ಮೃತ ಪಾರ್ವತಿ, ಮಕ್ಕಳಾದ ಅಕ್ಷರಾ (7) ಮತ್ತು ಅರ್ಚನಾ (4) ಇದ್ದರು. ಇವರಲ್ಲಿ ಪಾರ್ವತಿ ಅವರು ಸಾವನ್ನಪ್ಪಿದ್ದು, ಮೂವರು ತೀವ್ರ ಗಾಯಗೊಂಡಿದ್ದಾರೆ. ಆ ಗಾಯಾಳುಗಳನ್ನು ಇಲ್ಲಿನ ಬ್ರಿಮ್ಸ್ ಆಸ್ಪತ್ರೆಗೆ
ದಾಖಲಿಸಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಹುಮ್ನಾಬಾದ್ ತಹಶೀಲ್ದಾರ್ ನಾಗಯ್ಯ ಹಿರೆಮಠ್, ಹನುಮಾಬಾದ್ ತಾಲ್ಲೂಕು ಪಂಚಾಯತ್ ಗೋವಿಂದ್ ಮತ್ತು ಪಿಎ ರವಿಕುಮಾರ್ ಭೇಟಿ ನೀಡಿದರು. ಅಂತೆಯೇ ಕಾನೂನಿನ ಪ್ರಕಾರ ಪರಿಹಾರವನ್ನು ನೀಡಲಾಗುತ್ತದೆ ಎಂದು ಅಲ್ಲಿನ ತಹಶೀಲ್ದಾರ್ ಹೇಳಿದ್ದಾರೆ.