ಬೆಂಗಳೂರು: ಕೋಟ ಶ್ರೀನಿವಾಸ ಪೂಜಾರಿ ಅವರು ಸಮಾಜ ಕಲ್ಯಾಣ ಸಚಿವರಾಗಿ ಅಧಿಕಾರವನ್ನು ವಹಿಸಿಕೊಂಡ ನಂತರ ಇಲಾಖೆಯ ಅಧಿಕಾರಿಗಳ ಜತೆ ಮೊದಲ ಸಭೆಯನ್ನು ನಡೆಸಿದ್ದಾರೆ. ಈ ಮೊದಲ ಸಭೆಯಲ್ಲಿಯೇ ಪರಿಶಿಷ್ಟ ಜಾತಿಯವರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.
ಸೋಮವಾರದಂದು ವಿಕಾಸಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಥಮ ಸಭೆಯನ್ನು ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪರಿಶಿಷ್ಟ ಜಾತಿಯವರಿಗೆ ಮನೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನವನ್ನು 1.75 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.
ರಾಜ್ಯದಲ್ಲಿ 1 ಕೋಟಿ 20 ಲಕ್ಷ ಪರಿಶಿಷ್ಟ ಸಮಾಜವಿದೆ. ಪರಿಶಿಷ್ಟ ಜಾತಿಯವರಿಗೆ ಮನೆ ಕಟ್ಟಲಿಕ್ಕೆ 1 ಲಕ್ಷದ 75 ಸಾವಿರ ರೂಪಾಯಿಗಳು ಮಾತ್ರ ನೀಡಲಾಗುತ್ತಿದೆ. ಹೀಗಾಗಿ ಮನೆ ನಿರ್ಮಿಸಲು ಆರ್ಥಿಕವಾಗಿ ತುಂಬಾ ಕಷ್ಟ ಇದೆ. ಎಲ್ಲ ಬಡವರಿಗೆ ಮನೆ, ಶೌಚಾಲಯ, ವಿದ್ಯುತ್ ಕಲ್ಪಿಸುವ ವ್ಯವಸ್ಥೆ ಆಗಬೇಕು. ಅಲ್ಲದೆ ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತೆ ಆರೋಗ್ಯ ಇರಬೇಕು. ಈ ಕಾರಣಕ್ಕೆ ಅವರಿಗೆ ಕೊಡಬೇಕಿರುವ ಮನೆಗಳನ್ನು 5 ಲಕ್ಷಕ್ಕೆ ಏರಿಸಬೇಕೆಂದು ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಸಿಎಂ ಹಾಗೂ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸಿದ್ದೇವೆ ಎಂದು ಹೇಳಿದರು.
ಹಾಗೂ ಇಲಾಖೆಯಲ್ಲಿ ಒಂದು ವರ್ಷಗಳ ಕಾಲ ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಲು ನಿರ್ಧಾರ ಮಾಡಿದ್ದೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.