ಚಿಕ್ಕಮಗಳೂರು; (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಕೊಪ್ಪ ಹಾಗೂ ಶೃಂಗೇರಿ ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು ತಾಲ್ಲೂಕಿನ ಆಯ್ದ ಕಡೆ ಶಾಲೆಗೆ ರಜೆ ಘೋಷಣೆ
ಶೃಂಗೇರಿ ಹಾಗೂ ಕೊಪ್ಪ ತಾಲ್ಲೂಕಿನಾದ್ಯಾಂತ ರಜೆ ಘೋಷಿಸಿದ್ದರೆ ಇನ್ನು ಚಿಕ್ಕಮಗಳೂರು ತಾಲೂಕಿನ ಜಾಗರ, ವಸ್ತಾರೆ, ಖಾಂಡ್ಯ, ಆಲ್ದೂರು ಹಾಗೂ ಆವತಿ ಹೋಬಳಿಗಳಲ್ಲಿ ಅತಿಹೆಚ್ಚು ಮಳೆಯಾಗುತ್ತಿರುವುದರಿಂದ ಶಾಲಾ ಮಕ್ಕಳಿಗೆ ಹೋಗಲು ತೊಂದರೆಯಾಗುತ್ತಿದ್ದು, ಹಾಗೂ ಹಲವು ಶಾಲೆಯ ಕಟ್ಟಡಗಳು, ಹಳೆಯದಾಗಿದ್ದು, ದುರಸ್ತಿ ಅಗತ್ಯವಿರುತ್ತದೆ. ಈ ಸಂಬಂಧ ಮುಂಜಾಗ್ರತ ಕ್ರಮವಾಗಿ ದಿನಾಂಕ 07.07.2023 (ಶುಕ್ರವಾರ, ನಾಳೆ) ರಂದು ಚಿಕ್ಕಮಗಳೂರು ತಾಲೂಕಿನ ಜಾಗರ, ವಸ್ತಾರೆ, ಖಾಂಡ್ಯ, ಆಲ್ದೂರು ಹಾಗೂ ಆವತಿ ಹೋಬಳಿ ಶಾಲೆಗಳಿಗೆ ರಜೆ ಘೋಷಿಸಿ ಬಿಇಓ ಆದೇಶ ಹೊರಡಿಸಿದ್ದಾರೆ.
ಕೊಪ್ಪ ಶೃಂಗೇರಿ ಭಾಗದಲ್ಲಿ ವ್ಯಾಪಕ ಮಳೆ, ತುಂಬಿ ಹರಿದ ತುಂಗೆ
ಶೃಂಗೇರಿ ತಾಲ್ಲೂಕಿನ ಕಿಗ್ಗಾ, ನೆಮ್ಮಾರು ಸೇರಿದಂತೆ ಹಲವು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು, ತುಂಗಾ ನದಿ ತುಂಬಿ ಹರಿಯುತ್ತಿದೆ. ಇನ್ನು ಕೊಪ್ಪ ತಾಲೂಕಿನ ಮೇಗುಂದಾ ಹೋಬಳಿಯಾದ್ಯಂತ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದೂ, ರಭಸವಾಗಿ ಬೀಸುತ್ತಿರುವ ಗಾಳಿಯಿಂದ ಮರಗಳು ಉರುಳಿ ಬೀಳುತ್ತಿದ್ದು, ಬಹುತೇಕ ಕಡೆಗಳಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿದು ಜನ ಸಂಚಾರ ದುಸ್ತರವಾಗಿದೆ. ಗುಡ್ಡಗಾಡು ಪ್ರದೇಶವಾಗಿರುವ ಹೋಬಳಿಯಲ್ಲಿ ಪ್ರತೀ ವರ್ಷ ಅತೀವೃಷ್ಟಿಯಿಂದ ಅತೀ ಹೆಚ್ಚು ಹಾನಿ ಸಂಭವಿಸಿದ್ದು, ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳು ಮಳೆಗಾಳಿಯಲ್ಲಿ ಶಾಲೆಗೆ ತೆರಳಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ.