ಬೆಂಗಳೂರು: ಪ್ರತೀ 10 ವರ್ಷಗಳಿಗೊಮ್ಮೆ ಜಾತಿವಾರು ಜನಗಣತಿಯನ್ನು ನಡೆಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಆಗ್ರಹಿಸಿದ್ದಾರೆ.
ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಹತ್ತು ದಿನಗಳ ಚಿಕಿತ್ಸೆಯನ್ನು ಪಡೆದು ಮನೆಗೆ ಮರಳಿದ ಅವರು, ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ್ದಾರೆ.
ಪ್ರತಿ ಹತ್ತು ವರ್ಷಗಳಿಗೆ ಒಮ್ಮೆ ಜಾತಿವಾರು ಜನಗಣತಿಯನ್ನು ನಡೆಸುವುದರಿಂದ ವೈಜ್ಞಾನಿಕವಾಗಿ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ರೂಪಿಸಲು, ಅರ್ಹರಿಗೆ ಮೀಸಲಾತಿಯನ್ನು ಒದಗಿಸಲು ಸಾಧ್ಯವಾಗುತ್ತದೆ ಹಾಗೂ ಸಹಾಕಾರವಾಗುತ್ತದೆ ಎಂದು ಹೇಳಿದ್ದಾರೆ.
90 ವರ್ಷಗಳ ಹಿಂದಿನ ಜಾತಿ ಜನಗಣತಿಯ ವರದಿಯನ್ನು ಇಟ್ಟುಕೊಂಡು ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದು ಸರಿಯಾದಂತಹ ಕ್ರಮವಲ್ಲ ಸ್ವಾತಂತ್ರ‍್ಯ ನಂತರ ಎಲ್ಲಾ ಜಾತಿ, ವರ್ಗಗಳಿಗೂ ಸೂಕ್ತ ಅವಕಾಶಗಳು ಸಿಗುತ್ತಿಲ್ಲ ಇದೇ ಕಾರಣಕ್ಕೆ ನಮ್ಮ ಕಾಂಗ್ರೆಸ್ ಸರ್ಕಾರ ಇದ್ದಾಗ 180 ಕೋಟಿ ಹಣವನ್ನು ಖರ್ಚು ಮಾಡಿಸಿ ಜಾತಿ ಜನಗಣತಿಯನ್ನು ಮಾಡಿಸಲಾಗಿತ್ತು.
ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರೂ ಪ್ರಧಾನಿ ಮೋದಿ ಅವರ ಬಳಿಗೆ ನಿಯೋಗ ಕರೆದೊಯ್ದು ಜಾತಿ ಜನಗಣತಿ ನಡೆಸುವುದರ ಬಗ್ಗೆ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಹೀಗಾಗಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಸೆನ್ಸನ್ ನಡೆಯುವ ರೀತಿಯಲ್ಲೇ ಜಾತಿಗಣತಿ ನಡೆದರೆ ಒಳ್ಳೆಯದು. ಜಾತಿ ಜನಗಣತಿ ಅನುಷ್ಠಾನದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲೂ ಹೋರಾಟ ಮಾಡುತ್ತೇವೆ. ಇದರ ಬಗ್ಗೆ ಧ್ವನಿ ಎತ್ತುತ್ತೇವೆ ಎಂದು ತಿಳಿಸಿದ್ದಾರೆ.
\
ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರ್ಪಡೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಜಿ.ಟಿ.ದೇವೇಗೌಡ ನನ್ನ ಜತೆಗೆ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಜತೆಗೂ ಚರ್ಚಿಸಿದ್ದಾರೆ. ಈ ಬಗ್ಗೆ ಹೈಕಮಾಂಡ್ ಜತೆಗೆ ಚರ್ಚಿಸುವುದಾಗಿ ತಿಳಿಸಿದ್ದೇನೆ. ಈ ವಿಚಾರದಲ್ಲಿ ಸದ್ಯಕ್ಕೆ ನಡೆದಿರುವುದು ಇಷ್ಟೇ ಬೆಳವಣಿಗೆ. ಹೈಕಮಾಂಡ್ ಜತೆ ಚರ್ಚಿಸಿದ ಬಳಿಕ ಮುಂದಿನ ಬೆಳವಣಿಗೆ ತಿಳಿಸಲಾಗುವುದು ಎಂದು ಮಾಧ್ಯಮದವರ ಬಳಿ ಮಾಹಿತಿಯನ್ನು ನೀಡಿದ್ದಾರೆ.