ವಿಜಯಪುರ: ಹಿಂದೂ ದೇವಾಲಯದ ಒಳಗೆ ಮಲ ಮೂತ್ರವನ್ನು ತಂದು ಹಾಕಿರುವ ಘಟನೆ ಪಟ್ಟಣದ ಮೇಲೂರು ರಸ್ತೆ ನಾಗರಬಾವಿ ಬಳಿ ಇರುವ ವಿಜಯ ಮಾರುತಿ ಭಕ್ತ ಮಂಡಳಿ ದೇವಸ್ಥಾನದಲ್ಲಿ ನಡೆದಿದೆ.
ರಾತ್ರೊರಾತ್ರಿ ಕಿಡಿಗೇಡಿಗಳು ಹಿಂದೂ ದೇವಸ್ಥಾನದ ಗರ್ಭಗುಡಿಯೊಳಗೆ ಮಲಮೂತ್ರಗಳನ್ನು ಎಸೆದು ದೇವಸ್ಥಾನಕ್ಕೆ ಮತ್ತು ಹಿಂದೂಗಳ ಭಾವನೆಗೆ ದಕ್ಕೆ ತರುವ ಕೆಲಸವನ್ನು ಮಾಡಿದ್ದಾರೆ.
ಬೆಳಿಗ್ಗೆ ದೇವಾಲಯದಲ್ಲಿ ಆಗಿರುವ ಘಟನೆಯನ್ನು ತಿಳಿದು ಸ್ಥಳಕ್ಕೆ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು, ವಿಜಯ ಮಾರುತಿ ಭಕ್ತ,ಮಂಡಳಿ, ಹಿಂದೂ ಜನಾಂಗದವರು ಘಟನೆಯನ್ನು ಖಂಡಿಸಿ ಘಟನೆಗೆ ಕಾರಣವಾದ ಪಾಪಿಗಳನ್ನು ಶೀಘ್ರವೇ ಬಂಧಿಸಬೇಕು. ಕೃತ್ಯ ಎಸಗಿದವರು ಯಾರೇ ಆಗಿದ್ದರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು. ನಂತರ ದೇವಸ್ಥಾನವನ್ನು ಸ್ವಚ್ಛಗೊಳಿಸಿ ಗೋಮೂತ್ರ ಪ್ರೊಕ್ಷಣೆ ಮಾಡಿದರು.
ನಮ್ಮ ಹಿಂದೂ ದೇವಾಲಯದಲ್ಲಿ ಮಾಡಿರುವ ಹೇಸಿಗೆಯ ಕೃತ್ಯವನ್ನು ಮಸೀದಿ ಮತ್ತು ಚರ್ಚ್ ನಲ್ಲಿ ಮಾಡಿದ್ದರೇ ಪೊಲೀಸರು ಆ ಸ್ಥಳಕ್ಕೆ ರಕ್ಷಣೆಯನ್ನು ನೀಡುತ್ತಿದ್ದರು ಮತ್ತು ತನಿಖೆಯನ್ನು ಆದಷ್ಟು ಬೇಗನೆ ನಡೆಸುತ್ತಿದ್ದರು. ಹಿಂದೂಗಳು ಶಾಂತಿ ಪ್ರಿಯರು ಇಂತಹ ಘಟನೆ ನಡೆದಾಗ ಹಿಂದೂಗಳು ಸಂಘಟಿತರಾಗುವುದಿಲ್ಲ ಎಂದು ಪೊಲೀಸರು ನಿರ್ಲಕ್ಷ ತೋರಿಸಬೇಡಿ ಎಂದು ಬಿಜೆಪಿ ಟೌನ್ ಅಧ್ಯಕ್ಷ ಆರ್ ಮಂಜುನಾಥ್ ಹೇಳಿದರು.
ನಂತರ ಗ್ರಾಮಸ್ಥರು ಹಿಂದೂ ಸಂಘಟನೆಯ ಕಾರ್ಯಕರ್ತರು ವಿಜಯಪುರದ ಪೊಲೀಸ್ ಠಾಣೆಗೆ ತೆರಳಿ ದೂರನ್ನು ದಾಖಲಿಸಿದರು. ಸ್ಥಳಕ್ಕೆ ಬೆಂಗಳೂರಿನ ಡಿ ವೈ ಎಸ್ ಪಿ ನಾಗರಾಜ್, ವಿಜಯಪುರ ವೃತ್ತ ನಿರೀಕ್ಷಕ ಕೆ. ಶ್ರೀನಿವಾಸ್, ಪಿ ಎಸ್ ಐ ನಂದೀಶ್ ಆಗಮಿಸಿ ಪರಿಶೀಲನೆ ನಡೆಸಿದರು.