ಉಡುಪಿ: (ನ್ಯೂಸ್ ಮಲ್ನಾಡ್ ವರದಿ) ಉದ್ಯಮಿಯೊಬ್ಬರಿಗೆ MLA ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ, ಹಿಂದು ಕಾರ್ಯಕರ್ತೆ ಚೈತ್ರಾ ಕುಂದಾಪುರ ಎನ್ನುವವಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೋಚಕ ಕಾರ್ಯಾಚರಣೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆ
ಕಳೆದ ಕೆಲ ಸಮಯದಿಂದ ಚೈತ್ರಾ ಕುಂದಾಪುರ ತಲೆಮರೆಸಿಕೊಂಡಿದ್ದಳು. ಉಡುಪಿಯ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಚೈತ್ರಾ ಕುಂದಾಪುರ ಸೇರಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಏನಿದು ಪ್ರಕರಣ?
ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬ ಉದ್ಯಮಿಗೆ ಬೈಂದೂರು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಹಾಗೂ ಈಕೆಯ ಗ್ಯಾಂಗ್ ಸುಮಾರು 7 ಕೋಟಿ ರೂಪಾಯಿ ಮುಂಡಾಯಿಸಿದ್ದರು ಎಂದ ಆರೋಪ ಕೇಳಿಬಂದಿತ್ತು.
ಉದ್ಯಮಿಯ ಮುಗ್ದತೆ ಬಳಸಿಕೊಂಡು ವಂಚನೆ
ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಬಿಲ್ಲವ ನಾಯಕ, ಉದ್ಯಮಿಯ ಮುಗ್ಧತೆಯನ್ನು ಬಳಸಿಕೊಂಡು ವಂಚನೆ ಮಾಡಿದ್ದರಿಂದ ಚೈತ್ರಾ ಕುಂದಾಪುರ ಹಾಗೂ ಸಹಚರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯಿಂದ ಮೂರು ಹಂತದಲ್ಲಿ ಸುಮಾರು 7 ಕೋಟಿ ರೂಪಾಯಿಗಳನ್ನು ಆರೋಪಿಗಳು ಪಡೆದಿದ್ದರು. ಪ್ರಕರಣ ಸಂಬಂಧ ಮಂಗಳವಾರ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ, ಶ್ರೀಕಾಂತ್ ನಾಯಕ್ ಪೆಲತ್ತೂರುವನ್ನು ಸಿಸಿಬಿ ಪೊಲೀಸರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಡಿಗೆ ಭಾಷಣಕಾರ್ತಿ ಎಂದೇ ಫೇಮಸ್, ಸಂಘಟನೆಯೊಂದಿಗೂ ಇಲ್ಲ ಒಳ್ಳೆಯ ನಂಟು
ಉತ್ತರ ಕರ್ನಾಟಕ ಭಾಗದಲ್ಲಿ ಭಾಷಣಕಾರ್ತಿಯಾಗಿ ಗುರುತಿಸಿಕೊಂಡಿರುವ ಚೈತ್ರಾ ಕುಂದಾಪುರ ಗ್ಯಾಂಗ್, ಕೇಂದ್ರದ ನಾಯಕರು, ಆರ್‌ಎಸ್‌ಎಸ್ ಪ್ರಮುಖರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿ ಉದ್ಯಮಿಗೆ ಪಂಗನಾಮ ಹಾಕಿದೆ. ಇಷ್ಟೇ ಅಲ್ಲದೇ ಆರ್‌ಎಸ್‌ಎಸ್ ಪ್ರಮುಖರು ಎಂದು ನಕಲಿ ನಾಯಕರನ್ನು ಚೈತ್ರಾ ಕುಂದಾಪುರ ಟೀಮ್ ಸೃಷ್ಟಿ ಮಾಡಿತ್ತು. ಚೈತ್ರ ಕುರಿತಂತೆ ಹಲವು ಆರೋಪಗಳು ಕೇಳಿಬಂದಿದ್ದು, ಈ ಹಿಂದೆ ಹಿಂದು ಸಂಘಟನೆಯ ನಿಷ್ಠಾವಂತ ಕಾರ್ಯಕರ್ತರ ಮೇಲೆಯೇ ಈಕೆ ಸುಳ್ಳು ಕೇಸ್ ದಾಖಲಿಸಿದ್ದಳು.