Sunday, September 24, 2023
Homeವಿಶೇಷತಂತ್ರಜ್ಞಾನತಾನೇ ತಯಾರಿಸಿದ ಹೆಲಿಕಾಪ್ಟರ್‌ ನಿಂದ ಸಾವಿಗೀಡಾದ ಯುವಕ!!

ತಾನೇ ತಯಾರಿಸಿದ ಹೆಲಿಕಾಪ್ಟರ್‌ ನಿಂದ ಸಾವಿಗೀಡಾದ ಯುವಕ!!

ಮುಂಬೈ:  ಮಹಾರಾಷ್ಟ್ರದ ಯಾವತ್ಮಾಲ್ ಜಿಲ್ಲೆಯಲ್ಲಿ ತಾನೇ ತಯಾರಿಸಿದ ಹೆಲಿಕಾಪ್ಟರ್ ನಿಂದ ಯುವಕ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಹೆಲಿಕಾಪ್ಟರ್‌ನ ಬ್ಲೇಡ್ ತಲೆ ಮೇಲೆ ಬಿದ್ದು, ಯುವಕ ಸಾವನ್ನಪ್ಪಿದ್ದಾರೆ. 24 ವರ್ಷದ ಶೇಖ್ ಇಸ್ಮಾಯಿಲ್ ಎಂಬ ಯುವಕ ಅರ್ಧದಲ್ಲೇ ಓದು ನಿಲ್ಲಿಸಿ ತನ್ನಿಷ್ಟದ ಹವ್ಯಾಸದಂತೆ ಹೆಲಿಕಾಪ್ಟರ್ ನನ್ನು ನಿರ್ಮಿಸುವ ಪ್ರಯೋಗಕ್ಕೆ ಕೈಹಾಕಿದ್ದರು. ಆದರೆ, ಅವರೇ ಸಿದ್ಧಪಡಿಸಿದ ಹೆಲಿಕಾಪ್ಟರ್‌ನ ಟ್ರಯಲ್ ಸಮಯದಲ್ಲಿ ಆತನ ತಲೆಯ ಮೇಲೆ ಹೆಲಿಕಾಪ್ಟರ್ ಬ್ಲೇಡ್ ಬಿದ್ದು ಸಾವನ್ನಪ್ಪಿದ್ದಾರೆ.

ಮಂಗಳವಾರ ರಾತ್ರಿ ಈ ದುರ್ಘಟನೆ ನಡೆದಿದೆ. ಮುಂದೊoದು ದಿನ ತಾನೇ ಒಂದು ಉತ್ಪಾದನಾ ಕಂಪನಿಯನ್ನು ತೆರೆಯಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಶೇಖರ್ ಇಸ್ಮಾಯಿಲ್ ಹೆಲಿಕಾಪ್ಟರ್‌ನ ಪರೀಕ್ಷಾರ್ಥ ಹಾರಾಟದ ವೇಳೆ ಹೆಲಿಕಾಪ್ಟರ್‌ನಲ್ಲಿನ ದೋಷಗಳನ್ನು ಪರೀಕ್ಷಿಸಲು ಪ್ರಯತ್ನ ಮಾಡುತ್ತಿದ್ದಾಗ ತಲೆ ಮೇಲೆ ಬ್ಲೇಡ್ ಬಿದ್ದು ಸಾವನ್ನಪ್ಪಿದ್ದಾರೆ.

ಪ್ರವಾಹ ಮತ್ತಿತರ ಸಂಕಷ್ಟಕರ ಸಂದರ್ಭಗಳಲ್ಲಿ ಆ ಪ್ರದೇಶಗಳಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಸಣ್ಣ ಹೆಲಿಕಾಪ್ಟರ್‌ಗಳನ್ನು ನಿರ್ಮಿಸಬೇಕೆಂಬುದು ಶೇಖ್ ಇಸ್ಮಾಯಿಲ್ ಕನಸಾಗಿತ್ತು. ಆ ನಿಟ್ಟಿನಲ್ಲಿ ಅವರು ಯಶಸ್ವಿಯೂ ಆಗಿದ್ದರು. ತಾನು ನಿರ್ಮಿಸಿದಂತಹ ಹೆಲಿಕಾಪ್ಟರ್‌ಗೆ ಮುನ್ನಾ ಹೆಲಿಕಾಪ್ಟರ್ ಎಂದು ನಾಮಕರಣವನ್ನು ಮಾಡಿದ್ದರು. ಆದರೆ, ಆ ಹೆಲಿಕಾಪ್ಟರ್ ಅನ್ನು ಲೋಕಾರ್ಪಣೆ ಮಾಡಬೇಕೆಂಬ ಕನಸು ನನಸಾಗುವ ಮೊದಲೇ ಆ ಹೆಲಿಕಾಪ್ಟರ್‌ನಿಂದಲೇ ಅವರ ಪ್ರಾಣವೇ ಹೊರಟುಹೋಗಿದೆ.

ಮಹಾರಾಷ್ಟ್ರದ ಮಹಗಾಂವ್ ತಾಲೂಕಿನ ಫುಸಾವಂಗಿ ಎಂಬ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಶಾಲಾ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿ ಮೆಕ್ಯಾನಿಕ್ ಆಗಿದ್ದ ಇಸ್ಮಾಯಿಲ್ ತನ್ನ ವರ್ಕ್ಶಾಪ್ ನಲ್ಲಿ ಹೆಲಿಕಾಪ್ಟರ್ ಟೆಸ್ಟಿಂಗ್ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ತಾನೇ ಸ್ವತಃ ಹೆಲಿಕಾಪ್ಟರ್ ಒಂದನ್ನು ನಿರ್ಮಿಸಿದ್ದ ಅವರು ಅತ್ಯಂತ ಬುದ್ಧಿವಂತನಾಗಿದ್ದರು. ಊರಿನಲ್ಲಿದ್ದುಕೊಂಡೇ ಸಣ್ಣ ಹೆಲಿಕಾಪ್ಟರ್ ನಿರ್ಮಾಣ ಮಾಡಿದ್ದ ಆತನನ್ನು ಗೆಳೆಯರು ಹಾಗೂ ಊರಿನವರು ಫುಸಾವಂಗಿ ಗ್ರಾಮದ ರಾಂಚೋ ಎಂದು ಕರೆಯುತ್ತಿದ್ದರು.

ಆಗಸ್ಟ್ 15 ಕ್ಕೆ ಸ್ವಾತಂತ್ರ‍್ಯ ದಿನಾಚರಣೆಯಂದು ತಾನು ಸಿದ್ಧಪಡಿಸಿದ ಹೆಲಿಕಾಪ್ಟರ್ ಹಾರಿಸಬೇಕು ಎಂಬುದು ಆತನ ಉದ್ದೇಶವಾಗಿತ್ತು, ಆ ಕಾರಣದಿಂದ ಮಂಗಳವಾರ ರಾತ್ರಿ ಆ ಹೆಲಿಕಾಪ್ಟರ್‌ನ ಟ್ರಯಲ್ ನಡೆಸಲು ಹೊರಟಿದ್ದರು.

ಆದರೆ, ಹೆಲಿಕಾಪ್ಟರ್ ಹಾರಿಸಲು ಚಾಲನೆ ಮಾಡುತ್ತಿದ್ದಂತೆ, ಅದರಲ್ಲಿ ದೋಷ ಕಂಡುಬoದಿತ್ತು. ಆಗ ಏನಾಯಿತೆಂದು ನೋಡಲು ಹೋದ ಶೇಖ್ ಇಸ್ಮಾಯಿಲ್ ತಲೆಯ ಮೇಲೆ ತಿರುಗುತ್ತಿದ್ದ ಹೆಲಿಕಾಪ್ಟರ್‌ನ ಫ್ಯಾನ್ ತುಂಡಾಗಿ ಅದರ ಬ್ಲೇಡ್ ಬಿದ್ದಿದೆ. ಇದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Most Popular

Recent Comments