ಕಳಸ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆ ಹಿನ್ನೆಲೆ ಬೃಹತ್ ಗಾತ್ರದ ಬೀಟೆ ಮರವೊಂದು ರಸ್ತೆಗೆ ಉರುಳಿಬಿದ್ದ ಪರಿಣಾಮ ಎರಡು ಗಂಟೆಗಳ ಕಾಲ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆದ ಘಟನೆ ಕಳಸ ತಾಲೂಕಿನ ಚನ್ನಹಡ್ಲು ಗ್ರಾಮದಲ್ಲಿ ನಡೆದಿದೆ.
ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಮರ ತೆರವುಗೊಳಿಸಿದ ಗ್ರಾಮಸ್ಥರು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮಲೆನಾಡಲ್ಲಿ ಸಾಧಾರಣ ಮಳೆ ಜೊತೆ, ಭಾರೀ ಗಾಳಿ ಬೀಸುತ್ತಿದೆ.
ನಿಯಂತ್ರಣ ತಪ್ಪಿ ರಸ್ತೆಗುರುಳಿದ ಟಿಪ್ಪರ್ ಲಾರಿ
ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ರಸ್ತೆಗುರುಳಿದ ಘಟನೆ ಕಳಸ ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಎಂ.ಸ್ಯಾಂಡ್ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಮಗುಚಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. ಕಾಫಿನಾಡಲ್ಲಿ ಮಳೆ-ಗಾಳಿ ಅಬ್ಬರ ಮುಂದುವರಿದಿದ್ದು, ಮಲೆನಾಡಿನಲ್ಲಿ ಮಳೆಯಿಂದ ವಾಹನಗಳು ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸಿರುವ ಘಟನೆಗಳು ಹೆಚ್ಚು ವರದಿಯಾಗುತ್ತಿದೆ.
ಇನ್ನು ಈ ಕುರಿತು ಮುಂಜಾಗೃತಾ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಮುಂದಿನ 3 ದಿನ ಭಾರೀ ಮಳೆ ಸುರಿಯುವ ಎಚ್ಚರಿಕೆ ನೀಡಿದೆ. ಜು. 5, 6 ಹಾಗೂ 7 ರಂದು ಹೈ ಅಲರ್ಟ್ ಘೋಷಣೆ ಮಾಡಿದೆ. ಮುಂದಿನ 3 ದಿನ 115 ರಿಂದ 204 ಮಿ.ಮೀ. ಮಳೆ ಸಾಧ್ಯತೆಯಿದ್ದು ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ.
ಈ ಸಂದರ್ಭದಲ್ಲಿ ಸಾರ್ವಜನಿಕರು, ಪ್ರವಾಸಿಗರು ನದಿಗಳಿಗೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಸಾರ್ವಜನಿಕರು, ವಾಹನ ಸವಾರರು ವಿದ್ಯುತ್ ಕಂಬ, ಮರಗಳ ಬಳಿ ನಿಲ್ಲದಂತೆ ಸೂಚನೆ ನೀಡಲಾಗಿದೆ. ಮಕ್ಕಳು ನದಿ, ಕೆರೆ, ತಗ್ಗು ಪ್ರದೇಶಗಳ ಬಳಿ ಹೋಗದಂತೆ ಪೋಷಕರು, ಶಾಲಾ ಮುಖ್ಯಸ್ಥರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಹಿರಿಯರು ತಮ್ಮ ಮನೆಗಳಿಂದ ಹೊರಬಾರದಂತೆ, ಅನಿವಾರ್ಯವಾದಲ್ಲಿ ಮನೆ ಸದಸ್ಯರ ಜೊತೆ ಹೊರ ಹೋಗುವಂತೆ ಜಿಲ್ಲಾಡಳಿತ ಮನವಿ ಮಾಡಿದ್ದು, ಸಾರ್ವಜನಿಕರು ಜಿಲ್ಲಾಡಳಿತದ ನಿರ್ದೇಶನವನ್ನು ಪಾಲಿಸುವಂತೆ ತಿಳಿಸಲಾಗಿದೆ.