ಹೊಸದೆಹಲಿ: ಕಿತ್ತಳೆ ಹಣ್ಣಿನ ವ್ಯಾಪಾರಿ ಅಕ್ಷರ ಸಂತರೆಂದೇ ಪ್ರಸಿದ್ಧರಾಗಿದ್ದ ಹರೇಕಳ ಹಾಜಬ್ಬ ಅವರಿಗೆ ಇಂದು ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಇಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು ಭಾರತ ಸರ್ಕಾರ ನೀಡುವಂತಹ ನಾಲ್ಕನೇ ಅತೀ ದೊಡ್ಡ ನಾಗರಿಕ ಪ್ರಶಸ್ತಿ ” ಪದ್ಮಶ್ರೀ” ಪ್ರಶಸ್ತಿಯನ್ನು ದಕ್ಷಿಣ ಕನ್ನಡದವರಾದ ಹರೇಕಳ ಹಾಜಬ್ಬ ನವರಿಗೆ ನೀಡಿ ಗೌರವಿಸಿದ್ದಾರೆ. ಕೇಂದ್ರ ಸರ್ಕಾರವು 2020ನೇ ಸಾಲಿನ ‘ಪದ್ಮಶ್ರೀ’ ಪ್ರಶಸ್ತಿಗೆ ಆಯ್ಕೆ ಮಾಡಿ 2020ರ ಜನವರಿ 25ರಂದು ಘೋಷಿಸಿತ್ತು. ಅದೇವರ್ಷ ಮಾರ್ಚ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಮಾಡುವ ದಿನಾಂಕವನ್ನೂ ಸರ್ಕಾರ ನಿಗದಿಪಡಿಸಿತ್ತು. ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಘೋಷಿಸಿದ್ದರಿಂದ ಕಾರ್ಯಕ್ರಮವನ್ನು ಮುಂದೂಡಲ್ಪಟ್ಟಿತ್ತು.
ಹರೇಕಳ ಹಾಜಬ್ಬ ನವರ ಕಿರುಪರಿಚಯ :
ಹಾಜಬ್ಬನವರು ಮೂಲತಃ ಮಂಗಳೂರು ತಾಲೂಕಿನ ಕೊಣಾಜೆ ಸಮೀಪವಿರುವ ಹರೇಕಳ ನ್ಯೂಪಡ್ಪು ನವರು. ಇವರದ್ದು ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರನಿರುವ ಪುಟ್ಟ ಕುಟುಂಬ ಇವರು ತಮ್ಮ ಸಂಸಾರವನ್ನು ಕಿತ್ತಳೆ ಹಣ್ಣುಗಳನ್ನು ಮಾರಿ ಬಂದಂತಹ ಹಣದಲ್ಲಿಯೇ ಜೀವನವನ್ನು ನಡೆಸುತ್ತದರು. ಹರೇಕಳ ಹಾಜಬ್ಬನವರು ಕಿತ್ತಳೆ ಹಣ್ಣಿನ ವ್ಯಾಪಾರ ಮಾಡಿಕೊಂಡೇ ಸಂಸಾರವನ್ನು ನಡೆಸುವುದರ ಜೊತೆಗೆ ಬಡಮಕ್ಕಳಿಗೆ ಓದಲು ತೊಂದರೆಯಾಗಬಾರದೆಂದು ತಮ್ಮ ಸ್ವಂತ ದುಡಿಮೆಯಲ್ಲಿಯೇ ಮಂಗಳೂರಿನಲ್ಲಿ ಶಾಲೆಯನ್ನು ನಿರ್ಮಿಸಿ ನೂರಾರು ಮಕ್ಕಳ ವಿದ್ಯಾರ್ಜನೆಗೆ ನೆರವಾದರು.
ಇವರು ರಾಜ್ಯೋತ್ಸವ ಪ್ರಶಸ್ತಿ, 2004 ರಲ್ಲಿ ಕನ್ನಡಪ್ರಭ ಪತ್ರಿಕೆ “ವರ್ಷದ ವ್ಯಕ್ತಿ” ಪ್ರಶಸ್ತಿ, ಸಿಎನ್ಎನ್-ಐಬಿಎನ್ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು. ಗೃಹ ಸಚಿವ ಅಮಿತ್ ಷಾ ಮುಂತಾದ ಹಲವು ಗಣ್ಯರು ಉಪಸ್ಥಿತರಿದ್ದರು.