ಬೆಂಗಳೂರು: ಸರ್ಕಾರದ ಸಭೆ ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ ಹಣ್ಣಿನ ಬುಟ್ಟಿಯ ನಿಷೇಧ ನೀಡಿದ ಕುರಿತು ಸರ್ಕಾರ ಆ ನಿಷೇಧವನ್ನು ಹಿಂತೆಗುಕೊಳ್ಳುವoತೆ ಆಗ್ರಹಿಸಿ ರಾಜ್ಯದ ಎಲ್ಲಾ ಪುಷ್ಪ ಬೆಳೆಗಾರರು, ಪುಷ್ಪ ಕೃಷಿ ರೈತ ಸಂಘಟನೆಗಳು ರಾಜ್ಯದ ಎಲ್ಲಾ ಪುಷ್ಪ ಮಾರಾಟಗಾರರು ಮತ್ತು ಪುಷ್ಪ ಮಾರಾಟಗಾರರ ಸಂಘದ ಸದಸ್ಯರು ಗುರುವಾರ ಪ್ರತಿಭಟನೆಯನ್ನು ನಡೆಸಲಿದ್ದಾರೆ.
ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ ಮತ್ತು ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ ನೀಡದೆ ಕನ್ನಡ ಪುಸ್ತಕಗಳನ್ನು ನೀಡುವಂತೆ ಸಿಎಂ ಬೊಮ್ಮಾಯಿ ಹಾಗೂ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ರವರು ಹೊರಡಿಸಿರುವ ಆದೇಶ ರಾಜ್ಯದ ಹೂ ಬೆಳೆಗಾರರು ಹಾಗೂ ರೈತರ ಮೇಲೆ ಗದಾಪ್ರಹಾರವಾಗಿದೆ.
ಈ ಆದೇಶವನ್ನು ತಕ್ಷಣ ಹಿಂದಕ್ಕೆ ತಗೆದುಕೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಲು ದಕ್ಷಿಣ ಭಾರತದ ಪುಷ್ಪ ಬೆಳೆಗಾರರ ಸಂಘದ ಅಧ್ಯಕ್ಷರಾದ ಟಿ.ಎಂ ಅರವಿಂದ್, ನಿರ್ದೇಶಕರಾದ ಶ್ರೀಕಾಂತ್ ಬೆಲ್ಲಂಪಳ್ಳಿ, ರಾಜ್ಯದ ಎಲ್ಲಾ ಹೂ ಬೆಳೆಗಾರರರು, ಪುಷ್ಟ ಕೃಷಿ ರೈತ ಸಂಘಟನೆಗಳು ಮತ್ತು ರಾಜ್ಯದ ಎಲ್ಲಾ ಪುಷ್ಪ ಮಾರಾಟಗಾರರು ಮತ್ತು ಪುಷ್ಪ ಮಾರಾಟಗಾರರ ಸಂಘದ ನೇತೃತ್ವದಲ್ಲಿ ಬೆಂಗಳೂರಿನ ಅಂತರಾಷ್ಟ್ರೀಯ ಪುಷ್ಪ ಮಾರುಕಟ್ಟೆಯ ಎದುರು ಬೃಹತ್ ಪ್ರತಿಭಟನೆಯನ್ನು ನಡೆಸಲು ಆಯೋಜಿಸಲಾಗಿದೆ.
ಈ ಆದೇಶವನ್ನು ಕೂಡಲೇ ಹಿಂದಕ್ಕೆ ತಗೆದುಕೊಳ್ಳಬೇಕು ಎಂದು ಆಗ್ರಹಿಸಿ ಈ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ಹೂಗುಚ್ಛ, ಹಾರ, ಹಣ್ಣಿನ ಬುಟ್ಟಿಯನ್ನು ಹಿಡಿದುಕೊಂಡು ವಿನೂತನವಾಗಿ ಪ್ರತಿಭಟನೆಯನ್ನು ನಡೆಸಲಿದ್ದಾರೆ.