ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಪೊಲೀಸ್ ಠಾಣೆಯಲ್ಲಿ ಸಹಾಯ ಕೋರಿ ಬಂದವರಿಗೆ ಸ್ಪಂದನೆ ದೊರಕುತ್ತಿಲ್ಲವೇ?, ಸಿಬ್ಬಂದಿ ಸೌಜನ್ಯದಿಂದ ನಡೆದುಕೊಳ್ಳುತ್ತಿಲ್ಲವೆ?, ಹಾಗಾದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಿರಿಯ ಅಧಿಕಾರಿಗಳ ಗಮನಕ್ಕೆ ತನ್ನಿ. ಹೌದು, ಇಂತಹದೊಂದು ಹೊಸ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ಜಾರಿಗೆ ತಂದಿದ್ದು, ಇದಕ್ಕೆ “ಅವಲೋಕನ” ಎಂದು ಹೆಸರಿಸಿದೆ.
ಮೊಬೈಲ್ ನಲ್ಲೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ದೂರು ದಾಖಲಿಸಬಹುದು.
ದೂರು ದಾಖಲಿಸಲು ಠಾಣೆಗೆ ಹೋದಾಗ ಆದ ಅನುಭವಗಳನ್ನು ಹಂಚಿಕೊಳ್ಳಲು ಈ ವ್ಯವಸ್ಥೆ ತರಲಾಗಿದೆ. ನೀವು ಠಾಣೆಗೆ ಹೋದಾಗ ದೂರು ಅಲ್ಲಿ ಕ್ಯೂ ಆರ್ ಕೋಡ್ ಅಳವಡಿಸಿರಲಾಗಿರುತ್ತದೆ. ಅದನ್ನು ನಿಮ್ಮ ಮೊಬೈನ್ ನಲ್ಲೇ ಸ್ಕ್ಯಾನ್ ಮಾಡಿ ದೂರು ದಾಖಲಿಸಬಹುದು.
ದೂರು ದಾಖಲಿಸುವುದು ಹೇಗೆ?
ತಮ್ಮ ಮೊಬೈಲ್ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಠಾಣೆಯ ಹೆಸರು, ಠಾಣೆಗೆ ಹೋದ ಉದ್ದೇಶ, ದೂರವಾಣಿ ಸಂಖ್ಯೆ, ದೂರಿಗೆ ಸ್ವೀಕೃತಿ ನೀಡಲಾಗಿದೆಯೇ, ಎಂಬ ಇತ್ಯಾದಿ ಅನುಭವಗಳ್ನು ದಾಖಲಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಇದನ್ನೂ ಓದಿ; ದ್ವಿಚಕ್ರ ವಾಹನ ಸವಾರರಿಗೆ ಕಾಫಿನಾಡ ಪೊಲೀಸರ ಆರೋಗ್ಯ ಪಾಠ
ದೂರುದಾರರು ನೀಡುವ ಎಲ್ಲಾ ಪ್ರತಿಕ್ರಿಯೆಗಳು ಗೌಪ್ಯವಾಗಿ ಇಡಲಾಗುತ್ತದೆ:
ಪೊಲೀಸರ ವರ್ತನೆ ಉತ್ತಮವೇ, ಸಾಧಾರಣವೇ, ತೃಪ್ತಿಕರವಾಗಿಲ್ಲವೇ ಎಂಬುದನ್ನು ನಮೂದಿಸಲು ಅವಕಾಶ ಇದೆ. ದೂರುದಾರರು ನೀಡುವ ಎಲ್ಲಾ ಪ್ರತಿಕ್ರಿಯೆಗಳು ನೇರವಾಗಿ ನನ್ನ ಕಚೇರಿಗೆ ಬರಲಿದೆ. ಅದನ್ನು ಗೌಪ್ಯವಾಗಿ ಇಡಲಾಗುತ್ತದೆ’ ಎಂದು ವಿವರಿಸಿದ್ದಾರೆ.
ಸಾರ್ವಜನಿಕರು ನಿರ್ಭಯವಾಗಿ ವಿವರ ದಾಖಲಿಸಬಹುದು. ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಯನ್ನು ಜನಸ್ನೇಹಿ ಆಗಿಸುವುದು ಇದರ ಉದ್ದೇಶ. ಕಹಿ ಅನುಭವ ಆಗಿದ್ದಲ್ಲಿ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.