ಕಾಬೂಲ್: ಕುಟುಂಬದಲ್ಲಿರುವವರ ಹೊಟ್ಟೆ ತುಂಬಿಸಲು ಹೆತ್ತ ತಂದೆಯೇ ಮಗಳನ್ನು ಹಣಕ್ಕಾಗಿ 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿದ ಮನಕಲಕುವ ಘಟನೆ ಆಫ್ಘಾನಿಸ್ತಾನದಲ್ಲಿ ನಡೆದಿದೆ.
ಕಾಬೂಲ್ ನ 9 ವರ್ಷದ ಪರ್ವಾನಾ ಮಲ್ಲಿಕ್ ಎಂಬ ಬಾಲಕಿಯನ್ನು ಆಕೆಯ ತಂದೆ ಕುಟುಂಬದ ನಿರ್ವಹಣೆ ಮಾಡಲು 55 ವರ್ಷದ ಕುರುಬಾನ್ ಎಂಬ ವ್ಯಕ್ತಿಗೆ 2.00.000 ಕ್ಕೆ ಮಾರಾಟ ಮಾಡಿದ್ದಾರೆ. ಈ ಘಟನೆ ನಡೆದು ಒಂದು ತಿಂಗಳು ಕಳೆದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿಯನ್ನು ಮಾಡಿದೆ.
ತಾಲಿಬಾನ್ ಆಫ್ಘಾನಿಸ್ತಾನ ದೇಶವನ್ನು ವಶಪಡಿಸಿಕೊಂಡ ನಂತರ ಬಾಲಕಿಯ ಕುಟುಂಬದ ಎಂಟು ಜನರು ಪ್ರತಿದಿನದ ಆಹಾರಕ್ಕಾಗಿ ಪರಿತಪಿಸಬೇಕಾದ ಸ್ಥಿತಿಗೆ ಬಂದಿದ್ದರು. ಸಂದರ್ಶನವೊಂದರಲ್ಲಿ ನೋವಿನಿಂದಲೇ ಮಾತನಾಡಿದ ತಂದೆ ಕೆಲ ತಿಂಗಳುಗಳ ಹಿಂದೆ ಹನ್ನೆರಡು ವರ್ಷದ ಮಗಳನ್ನು ಮಾರಾಟ ಮಾಡಿದ್ದೆ ಬದುಕಲು ಈ ರೀತಿ ಮಾಡುವುದು ಅನಿವಾರ್ಯವಾಗಿದೆ ಎಂದಿದ್ದಾರೆ.
ಮಾರಾಟಕ್ಕೆ ಒಳಗಾಗಿರುವ ಬಾಲಕಿ ತಾನು ಶಿಕ್ಷಣವನ್ನು ಪಡೆದುಕೊಂಡು ಒಬ್ಬ ಶಿಕ್ಷಕಿ ಆಗಬೇಕು ಎಂಬ ಕನಸ್ಸನ್ನು ಇಟ್ಟುಕೊಂಡಿದ್ದಳು ಆದರೆ ಎಲ್ಲವೂ ತಲೆಕೆಳಗಾಯಿತು, ವೃದ್ಧನನ್ನು ಮದುವೆಯಾಗು ಎಂದು ನನ್ನ ಕುಟುಂಬವೇ ಒತ್ತಾಯ ಮಾಡುತ್ತಿದೆ ಎಂದು ಹೇಳಿಕೊಂಡಿದ್ದರು.
ಅಮೆರಿಕದ ಕೈಯಿಂದ ಅಧಿಕಾರ ವಶಕ್ಕೆ ಪಡೆದುಕೊಂಡ ತಾಲಿಬಾನಿಗಳು ನಾವು ಹಿಂದಿನಂತೆ ಇಲ್ಲ, ಮಹಿಳೆಯರು ಮತ್ತು ಮಕ್ಕಳ ಹಕ್ಕು ರಕ್ಷಣೆಗೆ ಬದ್ಧರಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ ಪರಿಸ್ಥಿತಿಯಲ್ಲಿ ಮಹಿಳೆಯರನ್ನು ಶಿಕ್ಷಣದಿಂದ ದೂರ ಇರಿಸುವಂತಹ ಕಾನೂನು ಜಾರಿ ಮಾಡಿದ್ದಾರೆ ಎಂದು ಕಾಬೂಲ್ ನಿವಾಸಿಗಳು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.