ಬೆಳಗಾವಿ: ಹಲಗಾ- ಮಚ್ಚೆ ಗ್ರಾಮದಲ್ಲಿ ಬೈಪಾಸ್ ರಸ್ತೆಯನ್ನು ನಿರ್ಮಿಸುವುದನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯಲ್ಲಿ ರೈತರೊಬ್ಬರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಮಚ್ಚೆ ಗ್ರಾಮದಲ್ಲಿ ನಡೆಸುತ್ತಿರುವ ಬೈಪಾಸ್ ರಸ್ತೆ ಕಾಮಗಾರಿಯನ್ನು ನಡೆಸಲು ವಿರೋಧ ವ್ಯಕ್ತಪಡಿಸಿದ ರೈತರು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಸಮಯದಲ್ಲಿ ಜಮೀನಿನ ರೈತ ಆಕಾಶ ಅನಗೋಳಕಾರ ಮೈಮೇಲೆ ಪೆಟ್ರೋಲ್ ನನ್ನು ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ನಂತರ ಕೂಡಲೇ ಸ್ಥಳದಲ್ಲಿದ್ದ ರೈತರು ಆತನನ್ನು ಸ್ಥಳೀಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರೈತರ ಪ್ರತಿಭಟನೆ ತೀವ್ರವಾದ ಕಾರಣ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಜನರನ್ನು ಚದುರಿಸಲು ಯತ್ನಿಸಿದರು ಆದರೂ ಪ್ರತಿಭಟನೆಯನ್ನು ನಿಲ್ಲಿಸದ ರೈತರು ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶಗೊಂಡು ಘೋಷಣೆ ಕೂಗುತ್ತಿದ್ದರು.
ಪ್ರತಿಭಟನೆಯನ್ನು ನಿಲ್ಲಿಸಲು ಪೊಲೀಸರು ಅನೇಕ ರೈತರು ಹಾಗೂ ರೈತ ಮಹಿಳೆಯರನ್ನು ವಶಕ್ಕೆ ಪಡೆದುಕೊಂಡು ಸ್ಥಳದಲ್ಲಿ ಅನೇಕ ಪೊಲೀಸರನ್ನು ಆಯೋಜಿಸಲಾಗಿದೆ. ಪೊಲೀಸರು ಜನರನ್ನು ವಶಕ್ಕೆ ಪಡೆದುಕೊಳ್ಳುವ ವೇಳೆ ಮಹಿಳೆಯರ ವಸ್ತ್ರವನ್ನು ಎಳೆದು ಹರಿದು ಹಾಕಿದ್ದಾರೆ ಮತ್ತು ಅವರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.