ಚಿಕ್ಕಮಗಳೂರು: ಕುರಿಗಾವಲು ಉಳಿಸಲು ಕಡೂರಿನಲ್ಲಿ ರೈತರು, ಕುರಿಗಾಹಿಗಳು ಬೃಹತ್ ಪ್ರತಿಭಟನೆಯನ್ನು ನಡೆಸಿದರು.
ಕುರಿಗಾವಲು ಉಳಿವಿಗಾಗಿ ನೂರಾರು ಕುರಿಗಾಹಿಗಳು ಮತ್ತು ರೈತರು ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರ ಮೆರವಣಿಗೆಗೆ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ಅಡ್ಡಿಪಡಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಜೋರಾಗಿ ನಡೆಯಿತು. ಕೊನೆಗೆ ಮೆರವಣಿಗೆ ನಡೆಸಿಯೇ ಸಿದ್ದ ಎಂದ ಪ್ರತಿಭಟನಾಕಾರ ರೈತರು ಮತ್ತು ಕುರಿಗಾಹಿಗಳು ಕಾಲ್ನಡಿಗೆ ಜಾಥಾವನ್ನು ನಡೆಸುವ ಸಮಯದಲ್ಲಿ ಪಟ್ಟಣದ ಕದಂಬ ಸರ್ಕಲ್ ಬಳಿ ಪೊಲೀಸರು ತಡೆದರು.
ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಬಳಿಯಿಂದ ಆರಂಭಗೊoಡ ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿತ್ತು. ನೂರಾರು ಸಂಖ್ಯೆಯಲ್ಲಿ ಜನರು ಜಮಾವಣೆಗೊಳ್ಳುತ್ತಲೇ ಪೊಲೀಸರು ಪ್ರತಿಭಟನಾಕಾರರನ್ನು ತಡೆದಾಗ ತಳ್ಳಾಟ-ನೂಕಾಟ ಏರ್ಪಟಿತ್ತು. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಧಿಕ್ಕಾರವನ್ನು ಕೂಗಿದರು. ರಸ್ತೆಯನ್ನು ದಾಟದಂತೆ ಬ್ಯಾರಿಕೇಡ್ ಗಳನ್ನು ಅಳವಡಿಸಿ, ಹಗ್ಗ ಹಾಕಿ ಪ್ರತಿಭಟನಾಕಾರರು ಮುಂದೆ ಹೋಗದಂತೆ ಪೊಲೀಸರು ತಡೆದರು.
ಕಡೂರು ತಾಲೂಕಿನ ಎಮ್ಮೆದೊಡ್ಡಿಯ ಸರ್ವೇ ನಂಬರ್ 70ರ ಕುರಿಕಾವಲು ಪ್ರದೇಶದಲ್ಲಿ ಸುಮಾರು 430 ಎಕರೆಯಷ್ಟು ಜಾಗದಲ್ಲಿ ಈ ಮೊದಲು ಕುರಿ ಮತ್ತು ದನಕರುಗಳನ್ನು ಮೇಯಿಸಲಾಗುತ್ತಿತ್ತು. ಇದೇ ಪ್ರದೇಶವನ್ನು ಕೆಲವರು ಒತ್ತುವರಿ ಮಾಡಿರುವ ಆರೋಪ ಕೂಡ ಕೇಳಿಬಂದಿತ್ತು. ಹೀಗಾಗಿ ಇದನ್ನು ಪ್ರಶ್ನೆ ಮಾಡಿದಂತಹ ವ್ಯಕ್ತಿಗಳ ಮೇಲೆಯೇ ಸುಳ್ಳು ಕೇಸ್ ಹಾಕಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಅನೇಕ ದಶಕಗಳಿಂದ ಇದೇ ಗೋಮಾಳದಲ್ಲಿ ದನಕರುಗಳು, ಕುರಿಗಳನ್ನು ಮೇಯಿಸುತ್ತಿದ್ದ ಪ್ರದೇಶವನ್ನು ಸಾರ್ವಜನಿಕ ನಿರ್ಬಂಧಿತ ಪ್ರದೇಶವನ್ನಾಗಿ ಮಾಡಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬೃಹತ್ ಗೋಮಾಳಕ್ಕೆ ಸಾರ್ವಜನಿಕರು ಪ್ರವೇಶಿಸದಂತೆ ತಹಶೀಲ್ದಾರ್ ನೇತೃತ್ವದಲ್ಲಿ ದೊಡ್ಡ ದೊಡ್ಡ ಟ್ರಂಚ್‌ಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ಪ್ರವೇಶ ಮಾಡುವುದನ್ನು ಈ ಪ್ರದೇಶದಲ್ಲಿ ನಿರ್ಬಂಧಿಸಲಾಗಿದೆ. ಆದರೆ ಕುರಿಗಳನ್ನು ಮೇಯಿಸಲು ಯಾವುದೇ ನಿರ್ಬಂಧವನ್ನು ವಿಧಿಸಿಲ್ಲ ಎಂದು ಆಡಳಿತದ ವತಿಯಿಂದ ಸ್ಪಷ್ಟನೆ ದೊರೆತಿದೆ.
ಏಕಾಏಕಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿರುವುದು ಪ್ರತಿಭಟನೆ ನಡೆಸಲು ಕಾರಣವಾಗಿದೆ. ಈ ಕಾರಣಕ್ಕೆ ಸೆಪ್ಟೆಂಬರ್ 2 ಗುರುವಾರದಂದು ಕಡೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಸಾರ್ನಿವಜನಿಕರಿಗೆ ನಿರ್ಬಂಧವನ್ನು ಹೇರಿರುವ ಕುರಿಗಾವಲು ಪ್ರದೇಶವನ್ನು ಮುಕ್ತಗೊಳಿಸಬೇಕು. ಅಲ್ಲದೇ ಸುಳ್ಳು ಕೇಸ್ ಹಾಕಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರ ರೈತರು, ಕುರಿಗಾಹಿಗಳು ಒತ್ತಾಯಿಸಿದರು. ಒಂದು ವೇಳೆ ರೈತರ ಹೋರಾಟಕ್ಕೆ ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟವನ್ನು ನಡೆಸುವುದಾಗಿ ಕಾಂಗ್ರೆಸ್ ಮುಖಂಡ ಕೆ.ಎಸ್ ಆನಂದ್ ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದ್ದಾರೆ.