ಮಂಗಳೂರು: ನಕಲಿ ಕೋವಿಡ್ ನೆಗೆಟಿವ್ ವರದಿಯನ್ನು ತೋರಿಸಿ ಮಂಗಳೂರು ಪ್ರವೇಶಕ್ಕೆ ಯತ್ನಿಸಿದಂತಹ ಕೇರಳದ ನಾಲ್ವರನ್ನು ಉಳ್ಳಾಲದ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಕೇರಳದ ಆದಿಲ್, ಹನಿನ್, ಇಸ್ಮಾಯಿಲ್ ಮತ್ತು ಅಬ್ದುಲ್ ತಮೀಮ್ ಬಂಧಿತ ಆರೋಪಿಗಳು. ಈ ನಾಲ್ವರು ಮೊಬೈಲ್ ನಲ್ಲಿ ಎಡಿಟ್ ಮಾಡಿದ್ದ ನಕಲಿ ಆರ್ ಟಿಪಿಸಿಆರ್ ವರದಿಯನ್ನು ತೋರಿಸಿ ಮಂಗಳೂರು ಪ್ರವೇಶಕ್ಕೆ ಯತ್ನಿಸಿದ್ದಾರೆ.
ಬಂಧಿತ ನಾಲ್ವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಾಗೂ ಗಡಿಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ, ಕೇರಳದಿಂದ ರಾಜ್ಯ ಪ್ರವೇಶಿಸುವವರಿಗೆ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಲಾಗಿದೆ.
ಇನ್ನು ಕೇರಳದಿಂದ ನೆಗೆಟಿವ್ ವರದಿಯೊಂದಿಗೆ ಮಂಗಳೂರಿಗೆ ಬರುವ ವಿದ್ಯಾರ್ಥಿಗಳಿಗೆ ಏಳು ದಿನಗಳ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಏಳು ದಿನಗಳ ನಂತರ ಮತ್ತೊಮ್ಮೆ ಆರ್ ಟಿಪಿಸಿಆರ್ ಪರೀಕ್ಷೆ ಕಡ್ಡಾಯವಾಗಿದೆ.