ಲಕ್ನೋ: ಪ್ರಾಯೋಗಿಕ ಪರೀಕ್ಷೆ ನಡೆಸುವ ನೆಪದಲ್ಲಿ 17 ಬಾಲಕಿಯರನ್ನು ರಾತ್ರಿ ಶಾಲೆಗೆ ಕರೆಸಿಕೊಂಡು ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಈ ಅಮಾನುಷ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದ್ದು ಆರೋಪಿಗಳು ಸೂರ್ಯದೇವ್ ಪಬ್ಲಿಕ್ ಸ್ಕೂಲ್ ನ ಸಂಚಾಲಕ ಯೋಗೇಶ್ ಕುಮಾರ್, ಜಿಜಿಎಸ್ ಇಂಟರ್ ನ್ಯಾಷನಲ್ ಸ್ಕೂಲ್ ನ ನಿರ್ವಾಹಕ ಅರ್ಜುನ್ ಸಿಂಗ್ ಎಂದು ತಿಳಿದುಬಂದಿದೆ.
ನವೆಂಬರ್ 18 ರಂದು ಪುರ್ಕಾಜಿ ಪಟ್ಟಣದ ಜಿಜಿಎಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 10 ನೇ ತರಗತಿಯ 17 ಮಂದಿ ವಿದ್ಯಾರ್ಥಿನಿಯರನ್ನು ಭೋಪಾದಿಂದ ಕರೆಸಿಕೊಂಡು ಪ್ರಾಯೋಗಿಕ ತರಗತಿ ಇರುವ ನೆಪ ಹೇಳಿ ಅವರನ್ನು ರಾತ್ರಿ ಶಾಲೆಯಲ್ಲಿಯೇ ಉಳಿಸಿಕೊಂಡು ಅವರಿಗೆ ಮತ್ತು ಬರುವ ಆಹಾರವನ್ನು ನೀಡಿ ದೌರ್ಜನ್ಯವನ್ನು ಎಸಗಿದ್ದಾರೆ.
ಬೆಳಿಗ್ಗೆ ವಿದ್ಯಾರ್ಥಿನಿಯರು ಮನೆಗೆ ತೆರಳುವಾಗ ಅವರಿಗೆ ವಿಷಯವನ್ನು ಮನೆಯಲ್ಲಿ ತಿಳಿಸಿದರೆ ಕೊಲೆ ಮಾಡುವ ಬೆದರಿಕೆಯನ್ನು ಹಾಕಿದ್ದಾರೆ. ಆ ಬಾಲಕಿಯರು ಬಡ ಕುಟುಂಬದವರಾಗಿದ್ದು ಅಂಜಿಕೊಂಡು ಸುಮ್ಮನಿದ್ದರು ಹಾಗೂ ಶಾಲೆಗೆ ಹೋಗಲು ಹಿಂದೇಟು ಹಾಕಿದರು.
17 ಜನರಲ್ಲಿ ಇಬ್ಬರು ವಿದ್ಯಾರ್ಥಿನಿಯರು ಮನೆಯವರಿಗೆ ವಿಷಯವನ್ನು ತಿಳಿಸಿದರು. ಆಕ್ರೋಶಗೊಂಡ ಪೋಷಕರು ಶಾಲಾ ಸಿಬ್ಬಂದಿಗಳನ್ನು ಕೂಡಲೇ ಬಂಧಿಸಬೇಕೆಂದು ಠಾಣೆಗೆ ತೆರಳಿ ದೂರನ್ನು ನೀಡಿದರು. ದೂರನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳದೆ ಅಪರಾಧಿಗಳಿಗೆ ಸಹಾಯ ಮಾಡಿದ್ದಾರೆ
ದೂರನ್ನು ನಿರ್ಲಕ್ಷಿಸಿದ ಎಸ್ ಎಚ್ ಒ ಅವರ ವಿರುದ್ಧ ದೂರು ದಾಖಲಾಗಿದ್ದು ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಹಾಗೂ ಅಪರಾಧ ಎಸಗಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಮುಜಾಫರ್ ನಗರದ ಎಸ್ ಎಸ್ ಪಿ ಅಭಿಷೇಕ್ ಯಾದವ್ ತಿಳಿಸಿದ್ದಾರೆ.