ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಲ್ಪ ಮತಗಳಿಂದ ಸೋತಿದೆ, ಅದನ್ನು ಸಮಚಿತ್ತ ಭಾವದಿಂದ ಸ್ವೀಕರಿಸಿದ್ದೇನೆ. ಬಿಜೆಪಿ ಕಾರ್ಯಕರ್ತರು ಚುನಾವಣೆ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿದ್ದಾರೆ, ಅವರಿಗೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಬಿಜೆಪಿ ಪರಾಜಿತ ಅಭ್ಯರ್ಥಿ ಡಿ ಎನ್ ಜೀವರಾಜ್ ತಿಳಿಸಿದರು.
ನರೇಂದ್ರ ಮೋದಿಯವರಿಗೆ ವಿದೇಶಗಳು ನೀಡುವ ಗೌರವ ಭಾರತದ ಪ್ರಜಾಪ್ರಭುತ್ವಕ್ಕೆ ಸಂದ ಗೌರವವಾಗಿದೆ, ಬಿಜೆಪಿ ರಾಷ್ಟ್ರದ ಏಳಿಗೆಗಾಗಿ ದುಡಿಯುತ್ತಿದ್ದು ಸಾಮಾನ್ಯನೂ ಪ್ರಧಾನಿ ಆಗಬಹುದು ಎಂದು ಬಿಜೆಪಿ ಪಕ್ಷ ತೋರಿಸಿದೆ ಎಂದರು.
ಕಾರ್ಯಕರ್ತರ ಪಕ್ಷ ನಿಷ್ಠೆಗೆ ನಾನು ಆಭಾರಿಯಾಗಿದ್ದು ಮುಂದೆಯೂ ಎಲ್ಲರ ನೋವು ನಲಿವುಗಳಿಗೆ ಸ್ಪಂದಿಸುತ್ತೇನೆ ಎಂದರು. ಪಟ್ಟಣದ ಚಪ್ಪರದ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಿತು, ತಾಲೂಕಿನ ಬಿಜೆಪಿ ಮುಖಂಡರು ಭಾಗವಹಿಸಿದ್ದರು.
ಪಕ್ಷ ವಿರೋಧಿ ನಡವಳಿಕೆ, ಉಚ್ಛಾಟನೆಗೆ ಮನವಿ:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಪಿತೂರಿ ನಡೆಸಿದ್ದಾರೆಂದು ಆರೋಪಿಸಿ ಧರೆಕೊಪ್ಪ ಗ್ರಾಮ ಪಂಚಾಯಿತಿ ಬಿಜೆಪಿ ಬೆಂಬಲಿತ ಸದಸ್ಯರಾದ ಭಾನುಪ್ರಕಾಶ್ ಹಾಗೂ ಅಸಂಘಟಿತ ಕಾರ್ಮಿಕರ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಉದಯ್ ಆನೆಗುಂದ ಅವರನ್ನು ಪಕ್ಷದಿಂದ 6 ವರ್ಷ ಉಚ್ಛಾಟನೆ ಮಾಡಲು ಸರ್ವಾನುಮತದಿಂದ ನಿರ್ಣಯ ಕೈಗೊಂಡಿದ್ದು ಜಿಲ್ಲಾಧ್ಯಕ್ಷರಿಗೆ ಪತ್ರ ಬರೆಯಲಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷರಾದ ಉಮೇಶ್ ತಲಗಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.
ಕಡೂರು ತಾಲ್ಲೂಕು ಕಛೇರಿ SDA ಕಿರಣ್ ಕುಮಾರ್ ಅಮನಾತು; ಜಿಲ್ಲಾಧಿಕಾರಿಗಳಿಂದ ಆದೇಶ
ಕಡೂರು: (ನ್ಯೂಸ್ ಮಲ್ನಾಡ್ ವರದಿ) ಸರ್ಕಾರಿ ಜಾಗವನ್ನು ಅಕ್ರಮವಾಗಿ ವ್ಯಕ್ತಿಯೊಬ್ಬರಿಗೆ ಖಾತೆ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನಲೆಯಲ್ಲಿ ಕಡೂರು ತಾಲ್ಲೂಕಿನ ಬೀರೂರು ಹೋಬಳಿಯ ಅಂದಿನ ಕಂದಾಯ ನಿರೀಕ್ಷರಾಗಿದ್ದ ಕಿರಣ್‌ಕುಮಾರ್ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಕೆ. ಎನ್ ರಮೇಶ್ ಆದೇಶ ಹೊರಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಕಡೂರು ತಹಶೀಲ್ದಾರ್ ಜೆ.ಉಮೇಶ್ ಹಾಗೂ ಆಗಿನ ಶಿರಸ್ತೇದಾರ್ ನಂಜುಂಡಯ್ಯ (ಹಾಲಿ ನಿವೃತ್ತ) ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಡೂರು ತಾಲ್ಲೂಕಿನ ಬೀರೂರು ಹೋಬಳಿಯ ಉಳ್ಳಿನಾಗೂರು ಗ್ರಾಮದ ಸರ್ವೆ ನಂಬರ್ 43ರ 5.04 ಎಕರೆ ಸರ್ಕಾರಿ ಬೀಳು ಜಾಗವನ್ನು ಅಕ್ರಮವಾಗಿ ಹನುಮಣ್ಣ ಎಂಬವರಿಗೆ ಖಾತೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತರೀಕೆರೆ ಉಪವಿಭಾಗಾಧಿಕಾರಿ ಪರಿಶೀಲನೆ ವರದಿ ನೀಡಿದ್ದಾರೆ. ಅಕ್ರಮವಾಗಿ ಖಾತೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖ ಇದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶದಲ್ಲಿ ತಿಳಿಸಿದ್ದಾರೆ. ಕಿರಣ್ ಕುಮಾರ್ ಕಡೂರು ತಾಲ್ಲೂಕು ಕಚೇರಿಯಲ್ಲಿ ನಿಯೋಜನೆಯಡಿ ಕಾರ್ಯನಿರ್ವಹಣೆ ಹಾಲಿ ಎಸ್‌ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.