ಇತ್ತೀಚಿನ ದಿನಗಳಲ್ಲಿ ಕೊರೊನಾ ಆತಂಕದ ನಡುವೆ ಪರಿಸರದ ಮೇಲಿನ ಕಾಳಜಿಯು ಕೂಡಾ ಜನರಿಗೆ ಹೆಚ್ಚಾಗಿದೆ ಈ ಉದ್ದೇಶದಿಂದ ಜನರ ಮನಸ್ಥಿತಿಗೆ ತಕ್ಕಂತೆ, ಪರಿಸರ ಸ್ನೇಹಿಯಾಗಿ ಹಾಗೂ ಆಧ್ಯಾತ್ಮಿಕವಾಗಿ ಹಬ್ಬವನ್ನು ಆಚರಣೆ ಮಾಡಲು ದೇಸೀ ಹಾಗೂ ಪರಿಸರ ಸ್ನೇಹಿ ಗಣೇಶವು ಸಿದ್ದವಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಗಂಗಾಪುರದ ಶ್ರೀ ರಾಘವೇಂದ್ರ ಗೋ ಆಶ್ರಮದಲ್ಲಿ ಸುಮಾರು ಮೂರು ಸಾವಿರ ಗಣೇಶ ಮೂರ್ತಿಗಳ ತಯಾರಿಯನ್ನು ಮಾಡಲಾಗಿದೆ. ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಆರಂಭವಾದoತಹ ಗೋಫಲ ಟ್ರಸ್ಟ್ ಈ ಪರಿಸರಸ್ನೇಹಿ ಗಣೇಶನ ಮೂರ್ತಿಯನ್ನು ಯೋಜಿಸಿ ಮಾರುಕಟ್ಟೆಗೆ ಬಿಡುಗಡೆಯನ್ನು ಮಾಡಿದೆ.
ಗೋಮಯ (ಹಸುವಿನ ಸೆಗಣಿ) ಹಾಗೂ ಆವೆ ಮಣ್ಣಿನಿಂದ ಮಾಡುವಂತಹ ಗಣೇಶ ಮೂರ್ತಿ ತಯಾರಿಕೆಗೆ ಯಾವುದೇ ರಾಸಾಯನಿಕ, ಬಣ್ಣ, ಅಂಟು ಉಪಯೋಗಿಸುವುದಿಲ್ಲ ಹಾಗೂ ಎರಡನೇ ಬಾರಿಗೆ ಈ ರೀತಿಯ ಗಣೇಶ ಮೂರ್ತಿಗಳನ್ನು ರಾಮಚಂದ್ರಾಪುರ ಮಠದ ಆಶ್ರಯದಲ್ಲಿ ತಯಾರು ಮಾಡಲಾಗುತ್ತಿದೆ.
ಇಲ್ಲಿ ತಯಾರು ಮಾಡುವಂತಹ ಗಣೇಶ ಮೂರ್ತಿ ಮಾತ್ರವಲ್ಲದೇ ಅದರ ಪ್ಯಾಕಿಂಗ್ ಮಾಡಲು ಬಳಸಿದ ವಸ್ತುಗಳು ಕೂಡಾ ರಾಸಾಯನಿಕ ಹಾಗೂ ಮಾಲಿನ್ಯ ರಹಿತವಾಗಿದೆ. ಜತೆಗೆ ಗಣೇಶನ ಪೂಜೆಯ ನಂತರ ಪಾತ್ರೆಯ ನೀರಿನಲ್ಲಿ ಗಣೇಶ ಮೂರ್ತಿಯನ್ನು ಮುಳುಗಿಸಬಹುದು ನಂತರ ನೀರಿನಲ್ಲಿ ಕರಗಿದ ಗಣೇಶ ಮೂರ್ತಿಯನ್ನು ಗಿಡಗಳಿಗೆ ಗೊಬ್ಬರವಾಗಿ ಬಳಕೆಮಾಡಬಹುದಾಗಿದೆ.
ಗಣೇಶ ಮೂರ್ತಿಯ ಜೊತೆಗೆ ಭಕ್ತರಿಗೆ ಅನುಕೂಲವಾಗುವಂತೆ ಮಂತ್ರ ಸಹಿತ ಪೂಜಾ ವಿಧಿವಿಧಾನಗಳನ್ನು ತಿಳಿಸುವಂತಹ ಕೈಪಿಡಿಯನ್ನು ನೀಡಲಾಗುತ್ತದೆ ರಿಯಾಯಿತಿ ದರದಲ್ಲಿ ಗಣೇಶ ಮೂರ್ತಿಗಳನ್ನು ಅದರ ಅಳತೆಗೆ ತಕ್ಕಂತೆ ದರವನ್ನು ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.