ಚೆನ್ನೈ: ಕೋವಿಡ್ ಕಾರಣದಿಂದ ಅರ್ಧದಲ್ಲಿ ಸ್ಥಗಿತಗೊಂಡಿದ್ದ ಐಪಿಎಲ್ ನ ಮುಂದಿನ ಭಾಗ ಯುಎಇ ನಲ್ಲಿ ನಡೆಯಲಿದೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಪುನರಾರಂಭವಾಗಲಿದ್ದು, ಮುಂಚಿತವಾಗಿ ಸಿದ್ದತೆಗಳು ನಡೆಯುತ್ತಿದೆ.
ಸೆ.19ರಂದು ಮೊದಲ ಪಂದ್ಯ ಆಡಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲವು ಆಟಗಾರರು ಇಂದು ದುಬೈಗೆ ತೆರಳಿದ್ದಾರೆ.
ನಾಯಕ ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಋತುರಾಜ್ ಗಾಯಕ್ವಾಡ್ ಮೊದಲಾದವರು ಇಂದು ಚೆನ್ನೈನಿಂದ ದುಬೈ ವಿಮಾನ ಏರಿದ್ದಾರೆ. ಉಳಿದ ಆಟಗಾರರು ನಂತರದ ದಿನಗಳಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಏಪ್ರಿಲ್ ನಲ್ಲಿ ನಡೆದಿದ್ದ ಐಪಿಎಲ್ ಕೂಟ ಕೋವಿಡ್ ಕಾರಣದಿಂದ ಅರ್ಧದಲ್ಲಿಯೇ ಸ್ಥಗಿತ ಮಾಡಲಾಗಿತ್ತು. ಇದೀಗ ಕೂಟವನ್ನು ಯುಎಇ ಗೆ ಸ್ಥಳಾಂತರಿಸಲಾಗಿದೆ. ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ಪಂದ್ಯಗಳು ನಡೆಯಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿರುವ ಏಳು ಪಂದ್ಯಗಳಲ್ಲಿ ಐದನ್ನು ಗೆದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ12 ಅಂಕಗಳೊoದಿಗೆ ಡೆಲ್ಲಿ ಕ್ಯಾಪಿಟಲ್ಸ್ ಇದ್ದರೆ, ಮೂರನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳಿವೆ.
ಸೆ.19 ರoದು ಚೆನ್ನೈ ತಂಡವು ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ದುಬೈ ನಲ್ಲಿ ನಡೆಯಲಿದೆ.