ಬೆಂಗಳೂರು: ಕುಡಿದ ನಶೆಯಲ್ಲಿದ್ದ ವೈದ್ಯರ ತಂಡ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಆತನ ಮೇಲೆ ಮೂತ್ರ ವಿಸರ್ಜಿಸಿದ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.
ಹಲ್ಲೆಗೊಳಗಾದವರು ಆಟೋ ಚಾಲಕ ಮುರಳಿ (26) ಯಲಹಂಕ ನಿವಾಸಿ. ಹಲ್ಲೆ ನಡೆಸಿದವರು ಖಾಸಗಿ ಆಸ್ಪತ್ರೆಯ ವೈದ್ಯ ರಾಕೇಶ್ ಶೆಟ್ಟಿ ಎಂದು ತಿಳಿದುಬಂದಿದೆ.
ಆಟೋ ಚಾಲಕ ಮುರುಳಿ ಅಡುಗೆ ವಸ್ತುಗಳನ್ನು ಸಾಗಿಸುವ ಸಲುವಾಗಿ ಒಂದು ಹೋಟೆಲ್ ಗೆ ಬಂದಿದ್ದರು, ಈ ವೇಳೆಯಲ್ಲಿ ಅಲ್ಲೇ ಕುಡಿದ ಅಮಲಿನಲ್ಲಿದ್ದ ವೈದ್ಯ ತನ್ನ ಇನ್ನೊಬ್ಬ ಸ್ನೇಹಿತನನ್ನು ಕರೆದುಕೊಂಡು ಬರಲು ಅವಾಚ್ಯ ಪದದಿಂದಲೇ ಹೇಳಿದ್ದಾರೆ. ಇದರಿಂದ ಕೋಪಗೊಂಡ ಚಾಲಕ ತಿರುಗಿ ಮಾತಾಡಿದ್ದಾನೆ ಮತ್ತು ಸ್ನೇಹಿತನನ್ನು ಕರೆದುಕೊಂಡು ಬರಲು ಒಪ್ಪಲಿಲ್ಲ ನಂತರ ಇವರ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ ಅಲ್ಲದೇ ಅಲ್ಲಿದ್ದಂತಹ ಉಳಿದ ವೈದ್ಯರು ಚಾಲಕ ಕುಡಿದ್ದಾನೆಂದು ಸುಳ್ಳು ಹೇಳಿ ಆತನ ಮೇಲೆ ಹಲ್ಲೆಯನ್ನು ನಡೆಸಿ ಆತನನ್ನು ವಿವಸ್ತ್ರಗೊಳಿಸಿ ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಲ್ಲದೇ ಜಾತಿನಿಂದನೆ ಮಾಡಿದ್ದಾರೆ.
ಘಟನೆಯ ನಂತರ ಚಾಲಕ ಸ್ಥಳೀಯ ಬಾಗಲೂರು ಠಾಣೆಗೆ ತೆರಳಿ ತನ್ನ ಮೇಲೆ ಹಲ್ಲೆ ನಡೆಸಿ ಮೃಗಗಳ ಹಾಗೆ ವರ್ತಿಸಿದ ವೈದ್ಯರ ಮೇಲೆ ದೂರನ್ನು ನೀಡಿದ್ದಾರೆ. ಪ್ರಕರಣದ ಸಂಬಂಧ ರಾಕೇಶ್ ಶೆಟ್ಟಿಯನ್ನು ಬಂಧಿಸಲಾಗಿದೆ. ಉಳಿದ ವೈದ್ಯರು ತಲೆಮಾರೆಸಿಕೊಂಡಿದ್ದು ತನಿಖೆ ಕಾರ್ಯ ಮುಂದುವರೆದಿದೆ.