ಮುಂಬೈ: 15 ವರ್ಷದ ಬಾಲಕಿಯೋರ್ವಳು ಕರಾಟೆ ಬೆಲ್ಟ್ ನಿಂದ ಹೆತ್ತ ತಾಯಿಯ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಆ ತಾಯಿಗೆ ತನ್ನ ಮಗಳು ವೈದ್ಯಕೀಯ ಶಿಕ್ಷಣ ಅಭ್ಯಾಸ ಮಾಡಲಿ ಎಂದು ಆಸೆ. ಆದರೆ ಮಗಳಿಗೆ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಅಮ್ಮ-ಮಗಳ ನಡುವೆ ಪದೇಪದೆ ಜಗಳ ಆಗುತ್ತಲೇ ಇತ್ತು. ಇದೇ ವಿಚಾರಕ್ಕೆ ಅಮ್ಮನ ವಿರುದ್ಧ ಕಳೆದ ತಿಂಗಳು ಈಕೆ ಪೊಲೀಸರಿಗೆ ದೂರನ್ನೂ ನೀಡಿದ್ದಳು. ಆದರೆ ಪೊಲೀಸರು ಅವರಿಬ್ಬರಿಗೂ ಬುದ್ಧಿ ಹೇಳಿ ಕಳಿಸಿದ್ದರು.
ಜು.30 ರಂದು ಪೊಲೀಸ್ ಠಾಣೆಗೆ ಕರೆ ಮಾಡಿದ ಬಾಲಕಿ, ನನ್ನ ತಾಯಿ ಏಕಾಏಕಿ ಬಿದ್ದು ಮೃತಪಟ್ಟಿದ್ದಾಳೆ ಎಂದು ಹೇಳಿದ್ದಳು. ನಂತರ ತಾಯಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳಿಸಲಾಗಿತ್ತು. ಮಹಿಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸತ್ತಿದ್ದಾರೆ ಎಂದು ಆಕೆಯ 15 ವರ್ಷದ ಮಗಳು ಹೇಳಿಕೆಯನ್ನು ನೀಡಿದ್ದಳು. ಪೊಲೀಸರು ಕೂಡಾ ಅದನ್ನು ನಂಬಿದ್ದರು.
ಶವದ ಮರಣೋತ್ತರ ಪರೀಕ್ಷೆ ವೇಳೆ ಆ ಮಹಿಳೆ ಸಹಜವಾಗಿ ಸತ್ತಿಲ್ಲ. ಆಕೆಯ ಕತ್ತು ಹಿಸುಕಿ ಕೊಲ್ಲಲಾಗಿದೆ ಎಂಬ ವಿಚಾರವು ಬೆಳಕಿಗೆ ಬಂದಿದೆ. ಕೂಡಲೇ ಬಾಲಕಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬೆಳಕಿಗೆ ಬಂದಿದ್ದು. ಆಕೆ ತನ್ನ ತಾಯಿಯನ್ನು ಕರಾಟೆ ಬೆಲ್ಟ್ ನಿಂದ ಕತ್ತು ಹಿಸುಕಿ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾಳೆ. ಸದ್ಯ ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.