ಬೆಂಗಳೂರು: ಎಂಎo ಫುಡ್ ಫ್ಯಾಕ್ಟರಿಯಲ್ಲಿ ಅನಿಲ ಸೋರಿಕೆಯಿಂದ ಸ್ಪೋಟ ಸಂಭವಿಸಿ ಇಬ್ಬರೂ ಕಾರ್ಮಿಕರು ಸಜೀವ ದಹನವಾಗಿರುವ ಘಟನೆ ಮಾಗಡಿ ರಸ್ತೆಯಲ್ಲಿರುವ ಗೋಪಾಲಪುರದ ಬಳಿ ನಡೆದಿದೆ.ಅ
ಬಿಹಾರ ಮೂಲದ ಸೌರಭ್ ಹಾಗೂ ಮನೀಶ್ ಮೃತ ಕಾರ್ಮಿಕರು. ಶಾಂತಿ, ಮನೀಷ್ ಸೇರಿ ನಾಲ್ವರು ಗಾಯಗೊಂಡಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ’ ಎಂದು ಮೂಲಗಳು ಮಾಹಿತಿಯನ್ನು ನೀಡಿದೆ.
ಸೋಮವಾರ ಮಧ್ಯಾಹ್ನ 1.45 ರ ಸುಮಾರಿಗೆ ಈ ಅವಘಡವು ಸಂಭವಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನು ನಂದಿಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ನಗರದ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಆಹಾರ ತಯಾರಿಸುವ ಬಾಯ್ಲರ್ ಹೆಚ್ಚು ಹೀಟ್ ಆಗಿ ಸ್ಫೋಟಗೊಂಡ ಪರಿಣಾಮ ಸಿಲಿಂಡರ್ ಕೂಡಸ್ಫೋಟವಾಗಿದೆ. ಘಟನೆಯಲ್ಲಿ ಮನೀಶ್ ಹಾಗೂ ಸೌರಭ್ ಎಂಬುವವರು ಮೃತಪಟ್ಟಿದ್ದಾರೆ ಎಂದರು.
ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಪಾಲಪುರ ಚಿಕ್ಕ ಪ್ರದೇಶವಾಗಿದ್ದು, ವಸತಿ ಪ್ರದೇಶದಲ್ಲಿ ಫ್ಯಾಕ್ಟರಿ ಪ್ರಾರಂಭ ನಡೆಸಲು ಪರವಾನಗಿ ಪಡೆದಿದ್ದರಾ ಎಂಬುದರ ಕುರಿತು ಪರಿಶೀಲನೆಯನ್ನು ನಡೆಸಬೇಕಿದೆ ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ.