ಮಧ್ಯಪ್ರದೇಶ : 3 ತಿಂಗಳ ಪುಟ್ಟ ಮಗುವನ್ನು ನೀರಿಗೆ ಅದ್ದಿ ಹೆತ್ತ ತಾಯಿಯೇ ಹತ್ಯೆ ಮಾಡಿದ ಘಟನೆ ಉಜ್ಜಯಿನಿಯ ಕಚ್ರೋಡ್ ನಲ್ಲಿ ನಡೆದಿದೆ.
ಆ ಮಗುವಿನ ತಾಯಿ ಸ್ವಾತಿ ಎಂಬ ಮಹಿಳೆ ಈ ಕೃತ್ಯವನ್ನು ಮಾಡಿದ್ದು ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಅಕ್ಟೋಬರ್ 12 ರಂದು 3 ತಿಂಗಳ ಹೆಣ್ಣು ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿ ನಂತರ ತನ್ನ ಮಗು ಕಾಣೆಯಾಗಿದೆ ಎಂದು ಮನೆಯವರಿಗೆ ತಿಳಿಸಿ ಹುಡುಕಾಟ ನಡೆಸುವ ನಾಟಕವನ್ನು ಮಾಡಿದ್ದಾಳೆ ಬಳಿಕ ಮಗು ಸಿಗದೇ ಇದ್ದಾಗ ಮನೆಯವರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರನ್ನು ನೀಡಿದ್ದಾರೆ. ನಂತರ ಸ್ವಾತಿ ಪ್ರತಿದಿನ ಪೊಲೀಸ್ ಠಾಣೆಗೆ ತೆರಳಿ ಕಣ್ಣೀರು ಹಾಕಿ ಮಗುವನ್ನು ಹುಡುಕಿಕೊಡುವಂತೆ ನಾಟಕ ಮಾಡಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರುಮಾಡಿದ್ದಾರೆ ಎಲ್ಲಾ ಕಡೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕೊನೆಗೆ ಆ ಮಗುವಿನ ಮನೆಯವರ ಮೇಲೆಯೇ ಅನುಮಾನಗೊಂಡು ಮನೆಯಲ್ಲಿಯೇ ತನಿಖೆಯನ್ನು ನಡೆಸಿದರು. ತನಿಖೆಯ ವೇಳೆ ಮನೆಯ ಮೂರನೇ ಮಹಡಿಯಲ್ಲಿರುವ ನೀರಿನ ಟ್ಯಾಂಕರ್ ನಲ್ಲಿ ಆ ಹೆಣ್ಣು ಮಗುವಿನ ಮೃತದೇಹ ಪತ್ತೆಯಾಗಿದೆ.
ಮನೆಯವರ ಮೇಲೆ ಅನುಮಾನಗೊಂಡ ಪೊಲೀಸರು ಸ್ವಾತಿಯ ಪತಿ, ಅತ್ತೆ, ಮಾವನನ್ನು ತನಿಖೆ ನಡೆಸಿದರು. ಎಲ್ಲರನ್ನು ವಿಚಾರಣೆ ನಡೆಸಿದ ನಂತರ ಸ್ವಾತಿಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. ಆಕೆ ನೀಡಿದ ಹೇಳಿಕೆಗೆ ಅನುಮಾನಗೊಂಡ ಪೋಲೀಸರು ಆಕೆಯ ಮೊಬೈಲ್ ನನ್ನು ಚೆಕ್ ಮಾಡಿದ್ದಾರೆ. ಮೊಬೈಲ್ ನಲ್ಲಿ ಆಕೆ ಗೂಗಲ್ ಮತ್ತು ಯುಟ್ಯೂಬ್ ನಲ್ಲಿ ಮಗುವನ್ನು ಕೊಲ್ಲುವುದು ಹೇಗೆ ಎಂದು ಅನೇಕ ಬಾರಿ ಸರ್ಚ್ ಮಾಡಿರುವುದು ತಿಳಿದುಬಂದಿದೆ. ಸ್ವಾತಿಯನ್ನು ವಶಕ್ಕೆ ಪಡೆದ ಪೊಲೀಸರು ಆಕೆಯನ್ನು ತೀವ್ರ ವಿಚಾರಣೆ ನಡೆಸಿದಾಗ ಆಕೆ ತನ್ನ ಮಗುವನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಕೊಲೆ ಮಾಡಲು ಕಾರಣ ಕೇಳಿದಾಗ ಆಕೆ ತನ್ನ ಅತ್ತೆ ಮಾವನಿಂದ ದೂರ ಆಗಿ ತನ್ನ ಗಂಡ ಮತ್ತು ತಾನು ಮಾತ್ರ ಬೇರೆ ಮನೆ ಮಾಡಿ ಸಂಸಾರ ನಡೆಸುವುದಾಗಿ ಕನಸನ್ನು ಕಟ್ಟಿಕೊಂಡಿದ್ದಳು ಅಲ್ಲದೇ ಈ ವಿಷಯವಾಗಿ ಅನೇಕ ಬಾರಿ ಗಂಡನಿಗೆ ಹೇಳಿದ್ದಳು ಆದರೆ ಗಂಡ ಒಪ್ಪಿಗೆಯನ್ನು ನೀಡದ ಕಾರಣ ಮಗುವಿನ ಮೇಲೆ ಕೋಪಗೊಂಡ ಆಕೆ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.