ಸಾಗರ: ತಾಲೂಕಿನಲ್ಲಿ ಹೆಚ್ಚುತ್ತಿರುವ ಗೋ ಕಳ್ಳಸಾಗಾಣಿಕೆ ತಡೆಯಬೇಕು ಮತ್ತು ಗೋವನ್ನು ಕದ್ದೋಯ್ದ ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದವರು ಪ್ರತಿಭಟನೆಯನ್ನು ನಡೆಸಿದರು.
ಗೋಕಳ್ಳಸಾಗಾಣಿಕೆಯನ್ನು ತಡೆಯಲು ಕಾರ್ಯಕರ್ತರು ಎಸ್‌ಎನ್ ನಗರ ವೃತ್ತದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆತಡೆ ನಡೆಸಿ ಪ್ರತಿಭಟನೆಯನ್ನು ನಡೆಸಿದರು.
ಅಕ್ಟೋಬರ್ 23 ರಂದು ರಾತ್ರಿ ಮಾರಿಕಾಂಬಾ ದೇವಸ್ಥಾನದ ಎದುರು ಮಲಗಿದ್ದ ಗೋವನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದರು. ರಸ್ತೆಯಲ್ಲಿ ಮಲಗಿದ್ದ ಜಾನುವಾರುಗಳನ್ನು ಕದ್ದೊಯ್ಯುವುದರ ಜೊತೆಗೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದಂತಹ ಗೋವುಗಳನ್ನು ಸಹ ಅಕ್ರಮವಾಗಿ ಕದ್ದೊಯ್ಯಲಾಗುತ್ತಿದೆ ಈ ಗೋಕಳ್ಳರನ್ನು ಹಿಡಿಯುವಂತೆ ಸಾಕಷ್ಟು ಬಾರಿ ಪೊಲೀಸ್ ಇಲಾಖೆಗೆ ಮನವಿಯನ್ನು ಸಲ್ಲಿಸಿದರೂ ಸಹ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ದೂರಿದರು.
ವಿಶ್ವಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ರವೀಶ್ ಮಾತನಾಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಇರುವ ಶಿಕಾರಿಪುರ ಕ್ಷೇತ್ರದಲ್ಲಿಯೇ ಹೆಚ್ಚಿನ ಗೋಹತ್ಯೆಯಾಗುತ್ತಿದೆ. ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ನಮ್ಮನ್ನು ಬಳಸಿಕೊಂಡು, ಹಿಂದುತ್ವ, ಗೋಸಂರಕ್ಷಣೆ ಮಾಡುವ ಬಗ್ಗೆ ಮಾತನಾಡುವ ರಾಜಕಾರಣಿಗಳು ನಗರಸಭೆ ಆಡಳಿತದಲ್ಲಿ ಈಗ ಗೋಕಳ್ಳ ಸಾಗಾಣಿಕೆ ನಡೆಯುತ್ತಿದ್ದರೂ ಕಠಿಣ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ವಿಶ್ವಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಪ್ರಕಾಶ್ ಕುಂಠೆ ಮಾತನಾಡಿ, ನಗರದ ವ್ಯಾಪ್ತಿಯಲ್ಲಿ ಗೋವು ಕಳ್ಳಸಾಗಾಣಿಕೆ ತಡೆಗಟ್ಟದೆ ಇದ್ದರೆ ಸಾಗರ ಬಂದ್‌ಗೆ ಕರೆ ನೀಡಿ ಪ್ರತಿಭಟನೆ ನಡೆಸುತ್ತೇವೆ ಎಂದರು .
ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಐ.ವಿ.ಹೆಗಡೆ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಕಾಮತ್, ಭಜರಂಗ ದಳದ ತಾಲೂಕು ಸಂಚಾಲಕ ಸಂತೋಷ್ ಶಿವಾಜಿ, ಪ್ರಮುಖರಾದ ಪ್ರತಿಮಾ ಜೋಗಿ, ಕೆ.ವಿ.ಪ್ರವೀಣ್, ಶ್ರೀಧರ್ ಸಾಗರ್, ಕಿರಣ್, ಮುರಳಿ ಮಂಚಾಲೆ, ಬಾಲಕೃಷ್ಣ ಗುಳೇದ್, ಕೋಮಲ್ ರಾಘವೇಂದ್ರ, ಅಶ್ವಿನಿ ಕಾಮತ್, ರವಿಕುಮಾರ್, ವಿರೂಪಾಕ್ಷ, ಲಕ್ಷ್ಮಣ್ ಮಾಗಡಿ ಇನ್ನಿತರರು ಹಾಜರಿದ್ದರು