ಬೈಂದೂರು: ಗೋಹತ್ಯೆಯನ್ನು ವಿರೋಧಿಸಿ ಗಂಗೊಳ್ಳಿಯಲ್ಲಿ ಅ.1ರಂದು ನಡೆದ ಪ್ರತಿಭಟನೆ ನಡೆಸಿದ ಬಳಿಕ ಒಂದು ಕೋಮಿನವರು ಮೀನು ಖರೀದಿಸುವುದನ್ನು ಸಂಪೂರ್ಣ ಬಹಿಷ್ಕರಿಸಿದ ಘಟನೆ ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ನಡೆದಿದೆ.
ಕಳೆದ ಮೂರು ದಿನಗಳಿಂದ ಮೀನು ಖರೀಧಿಸುವವರಿಲ್ಲದೆ ಮಾರುಕಟ್ಟೆ ಭಣಗುಡುತ್ತಿದೆ, ಗಂಗೊಳ್ಳಿ ಮಾರುಕಟ್ಟೆಯಲ್ಲಿ ಮೀನು ಖರೀದಿಸಬಾರದು ಎಂದು ಒಂದು ಕೋಮಿನ ಮುಖಂಡರು ತಾಕೀತು ಮಾಡಿದ್ದಾರೆ ಎಂದು ಹೇಳಲಾಗಿದೆ.
ಗೋ ಹತ್ಯೆಯನ್ನು ತಡೆಯಲು ಹಿಂದು ಸಂಘಟನೆಗಳು ನಡೆಸಿದ ಪ್ರತಿಭಟನೆಗೆ ಉತ್ತರವಾಗಿ ಮಹಿಳಾ ಮೀನುಗಾರರಿಂದ ಮೀನು ಖರೀದಿಸಬಾರದು ಎಂಬ ಸೂಚನೆ ಮುಖಂಡರಿಂದ ಪರೋಕ್ಷವಾಗಿ ನೀಡಲಾಗಿದೆ. ಹೀಗಾಗಿ ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಮೀನು ಮಾರುಕಟ್ಟೆ ಬಿಕೋ ಎನ್ನುತ್ತಿದೆ.
ಸದ್ದಿಲ್ಲದೆ ನಡೆಯುತ್ತಿರುವ ಈ ಬಹಿಷ್ಕಾರದಿಂದ ಕಳೆದ ಐದು ದಿನಗಳಿಂದ ಮೀನು ಮಾರಾಟ ಆಗದೆ ಸಾವಿರಾರು ರೂ. ಮೌಲ್ಯದ ಮೀನು ಕೊಳೆತು ಹೋಗುತ್ತಿದೆ ಎಂದು ಮೀನು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ಮೀನು ಖರೀದಿಗೆ ಬರುವ ತಮ್ಮ ಕೋಮಿನ ಜನರನ್ನು ವಾಪಸ್ ಹಿಂದಕ್ಕೆ ಕಳುಹಿಸುತ್ತಿರುವ ಯುವಕರ ವಿರುದ್ಧ ಮಹಿಳಾ ಮೀನುಗಾರರು ಗಂಗೊಳ್ಳಿ ಪೊಲೀಸ್ ಠಾಣೆಗೆ ತೆರೆಳಿ ದೂರನ್ನು ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿ ಹಿಂದೆ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.