ತುಮಕೂರು: ಪೊಲೀಸರು ಲಂಚವನ್ನು ಪಡೆಯುವ ವೇಳೆಯಲ್ಲಿ ಎಸಿಬಿ ಬಲೆಗೆ ಸಿಕ್ಕಿಬಿದ್ದ ನಂತರ ಅಲ್ಲಿಂದ ಪರಾರಿಯಾಗುವ ವೇಳೆ ಪೊಲೀಸರನ್ನು ಹಿಡಿಯಲು ಪೊಲೀಸರೇ ರಸ್ತೆಯಲ್ಲಿ ಓಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಸಿ. ಎಸ್. ಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು. ನಗರದ ಠಾಣೆಯ ವ್ಯಾಪ್ತಿಯಲ್ಲಿ ಕೌಟುಂಬಿಕ ಕಲಹದ ವಿಚಾರವೊಂದರಲ್ಲಿ ಚಂದ್ರಣ ಎಂಬ ವ್ಯಕ್ತಿಯ ವಿರುದ್ಧ ದೂರುದಾಖಲಾಗಿತ್ತು ಹಾಗೂ ಅವರ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ನಂತರ ಕೋರ್ಟ್ ನಿಂದ ಜಾಮೀನು ಪಡೆದುಕೊಂಡು ಕಾರನ್ನು ಬಿಡಿಸಿಕೊಂಡು ಹೋಗಲು ಠಾಣೆಗೆ ಬಂದಾಗ ಪೊಲೀಸರು 28 ಸಾವಿರ ಲಂಚವನ್ನು ನೀಡಿದ ನಂತರ ಕಾರನ್ನು ಬಿಡಿಸಿಕೊಡುವುದಾಗಿ ಠಾಣೆಯ ಪಿ ಎಸ್ ಐ ಸೋಮಶೇಖರ್ ಹಾಗೂ ಪೊಲೀಸ್ ಪೇದೆ ನಯಾಜ್ ಅಹಮದ್ ಹೇಳಿದರು.
ಪೊಲೀಸರು ಕೇಳಿದ 28.000 ಹಣದಲ್ಲಿ 12.000 ಹಣವನ್ನು ನೀಡಿದ ಅವರು ಪೊಲೀಸರು ಉಳಿದ ಹಣವನ್ನು ನೀಡಲು ಹೇಳಿದಾಗ ಚಂದ್ರಣ ಅವರು ಎಸಿಬಿ ಕಚೇರಿಗೆ ತೆರಳಿ ದೂರನ್ನು ನೀಡಿದರು. ನಂತರ ಅಧಿಕಾರಿಗಳು ಹೇಳಿದ ಮಾರ್ಗವನ್ನು ಅನುಸರಿಸಿದ ವ್ಯಕ್ತಿ ಉಳಿದ 16.000 ಬಾಕಿ ಹಣವನ್ನು ನೀಡುವ ವೇಳೆ ಎಸಿಬಿ ಇನ್ಸ್ ಪೆಕ್ಟರ್ ವಿಜಯಲಕ್ಷ್ಮಿ ನೇತೃತ್ವದ ತಂಡ ದಾಳಿಯನ್ನು ನಡೆಸಿದಾಗ ಸೋಮಶೇಖರ್ ಮತ್ತು ನಯಾಜ್ ಅಹ್ಮದ್ ಇಬ್ಬರೂ ಸಿಕ್ಕಿಬಿದ್ದಿದ್ದರು. ನಂತರ ಅವರನ್ನು ವಿಚಾರಣೆ ನಡೆಸಲು ನಿರ್ಧರಿಸಿ ಎಸಿಬಿ ಅಧಿಕಾರಿಗಳು ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಪಿ ಎಸ್ ಐ ಸೋಮಶೇಖರ್ ತನ್ನ ಫೋನನ್ನು ತಗೆದುಕೊಂಡು ಅಲ್ಲಿಂದ ತಪ್ಪಿಸಿಕೊಂಡು ಬೈಕಿನಲ್ಲಿ ಪರಾರಿಯಾಗಿದ್ದಾರೆ. ನಂತರ ಅವರನ್ನು ಹಿಡಿಯಲು ಎಸಿಬಿ ಅಧಿಕಾರಿಗಳು ರಸ್ತೆಯಲ್ಲಿಯೇ ಓಡಿ ಹೋಗಿದ್ದಾರೆ. ನಂತರ ತಪ್ಪಿಸಿಕೊಂಡ ಪಿ ಎಸ್ ಐ ಸೋಮಶೇಖರ್ ರವರನ್ನು ಗುಬ್ಬಿ ತಾಲೂಕಿನ ಜನ್ನೇನಹಳ್ಳಿ ಅರಣ್ಯ ಪ್ರದೇಶದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರನ್ನು ಪೋಲಿಸರೇ ಹಿಡಿಯಲು ರಸ್ತೆಯಲ್ಲಿ ಓಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.