ಮಂಗಳೂರು: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತರುವ ಬಗ್ಗೆ ವಿಶ್ವ ಹಿಂದೂ ಪರಿಷತ್ ರಾಜ್ಯಾದ್ಯಂತ ಹೋರಾಟ ಮಾಡಲು ನಿರ್ಧಾರ ಮಾಡಿದ್ದು ಸ್ವಾಮೀಜಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವ ಕೆಲಸವನ್ನು ಮಾಡಿದೆ.
ಮಂಗಳೂರಿನ ವಿವಿಧ ಕ್ಷೇತ್ರಗಳ ಸ್ವಾಮೀಜಿಗಳು ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿಯನ್ನು ನಡೆಸಿ ಶೀಘ್ರವೇ ಮತಾಂತರ ನಿಷೇಧ ಕಾಯಿದೆ ಜಾರಿಯಾಗಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯಿದೆಯನ್ನು ಆದಷ್ಟು ಬೇಗನೆ ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದು ಅದಕ್ಕೆ ಬೇಕಾಗುವಂತಹ ಮೂಲಭೂತ ಕಾನೂನುಗಳನ್ನು ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿ, ಸುದ್ದಿಗೋಷ್ಠಿಯಲ್ಲಿ ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಸ್ವಾಮೀಜಿ, ಗುರುಪುರ ವಜ್ರದೇಹಿ ರಾಜಶೇಖಾರನಂದ ಸ್ವಾಮೀಜಿ, ಚಿಲಿಂಬಿ ಓಂಶಕ್ತಿ ಮಠದ ವಿದ್ಯಾನಂದ ಸ್ವರಸ್ವತಿ ಸ್ವಾಮೀಜಿ ಮತ್ತು ಮಾತೃಶ್ರೀ ಶಿವಜ್ಞಾನಿ ಸ್ವಾಮೀಜಿ ಜಂಟಿ ಸುದ್ದಿಗೋಷ್ಠಿಯನ್ನು ನಡೆಸಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕಾರ್ಯಕ್ರಮದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ, “ಹಿಂದೂಗಳ ಮತಾಂತರ ವಿರೋಧವಾಗಿ ಸರಕಾರ ಶೀಘ್ರವಾಗಿ ಕಠಿಣ ಕಾನೂನನ್ನು ಜಾರಿಗೊಳಿಸಬೇಕು. ಇದರಿಂದ ಮಾತ್ರ ಮತಾಂತರ ಪಿಡುಗು ನಿರ್ಮೂಲನೆ ಸಾಧ್ಯವಾಗುತ್ತದೆ ಅಲ್ಪಸಂಖ್ಯಾತರು ಬಹುಸಂಖ್ಯಾತ ಹಿಂದೂಗಳನ್ನು ಮದುವೆ, ಮನೆ ಕೊಡಿಸುವ, ಶಿಕ್ಷಣ ಕೊಡಿಸುವ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದಾರೆ. ಇದರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ . ಈಗ ಐಟಿ- ಬಿಟಿ ಕಂಪೆನಿಗಳಲ್ಲಿಯೂ ಉದ್ಯೋಗದ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ,” ಎಂದು ಹೇಳಿದರು.
ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಓಂಶಕ್ತಿ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, “ರಾಜ್ಯಾದ್ಯಂತ ಲವ್ ಜಿಹಾದ್ ವೈರಸ್ ರೀತಿಯಲ್ಲಿಯೇ ಬಹಳ ಬೇಗ ಹರಡುತ್ತಿದ್ದು, ಬಹುಸಂಖ್ಯಾತ ಹಿಂದೂಗಳನ್ನು ಸಂಪೂರ್ಣ ನಾಶಮಾಡುವ ಹುನ್ನಾರ ಇದರ ಹಿಂದೆ ಅಡಗಿದೆ. ಹಿಂದೂ ಹುಡುಗಿಯರನ್ನೇ ಟಾರ್ಗೆಟ್ ಮಾಡಿ ಮತಾಂತರ ಮಾಡಲಾಗುತ್ತಿದೆ. ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳನ್ನು ನಾವೆಲ್ಲರೂ ಗೌರವಿಸುತ್ತೇವೆ . ಆದರೆ ಹಿಂದೂ ಧರ್ಮದವರನ್ನು ಮತಾಂತರ ಮಾಡಿದ್ದಲ್ಲಿ ಮಾತ್ರ ನಾವು ಎಂದಿಗೂ ಸುಮ್ಮನಿರುವುದಿಲ್ಲ. ಮತಾಂತರವನ್ನು ವಿರೋಧಿಸಿ ಅಮರಣಾಂತ ಉಪವಾಸ ಮಾಡಲೂ ನಾವು ಸಿದ್ಧ,” ಎಂದು ಹೇಳಿದರು.
ಮಾಣಿಲ ಮೋಹನದಾಸ ಸ್ವಾಮೀಜಿ ಮಾತನಾಡಿ, “ಎಲ್ಲಾ ಕಡೆಗಳಲ್ಲೂ ಮತಾಂತರ ಜಾಲ ವ್ಯಾಪಿಸುತ್ತಿದ್ದು, ಬೇರೆ ಬೇರೆ ರೀತಿಯ ಆಮಿಷಗಳನ್ನೊಡ್ಡಿ ಮತಾಂತರ ನಡೆಯುತ್ತಿದೆ. ಇದನ್ನು ತೊಡೆದುಹಾಕಲು ಕಾನೂನಾತ್ಮಕ ವ್ಯವಸ್ಥೆಗಳನ್ನು ಜಾರಿಗೆ ತರಬೇಕು” ಎಂದು ಹೇಳಿದರು.