ಬೆಂಗಳೂರು : ದೇಶದಲ್ಲಿ ತೈಲ ಹಾಗೂ ಇಂಧನದ ಬೆಲೆಯಲ್ಲಿ ಅದ ಏರಿಕೆಯನ್ನು ತೀವ್ರವಾಗಿ ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಎತ್ತಿನಗಾಡಿ ಚಲೋ ಪ್ರತಿಭಟನೆಯನ್ನು ನಡೆಸಿದ್ದಾರೆ.
ಇಂದಿನಿoದ ರಾಜ್ಯ ವಿಧಾನ ಮಂಡಲ ಅಧಿವೇಶನವು ಆರಂಭವಾಗಲಿದ್ದು, ರಾಜ್ಯ ಸರ್ಕಾರದ ಗಮನವನ್ನು ಸೆಳೆಯಲು ಕಾಂಗ್ರೆಸ್ ನಾಯಕರು ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.
ಈ ಪ್ರತಿಭಟನೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್, ಪರಿಷತ್ ಸದಸ್ಯ ನಜಿರ್ ಅಹಮದ್ ಭಾಗವಹಿಸಿದ್ದಾರೆ.
ನಗರದ ಶಿವಾನಂದ ಸರ್ಕಲ್ ನ ಸರ್ಕಾರಿ ನಿವಾಸದಿಂದ ಸಿದ್ದರಾಮಯ್ಯ ಹಾಗೂ ಸದಾಶಿವನಗರ ನಿವಾಸದಿಂದ ಡಿ.ಕೆ.ಶಿವಕುಮಾರ್ ಪ್ರತಿಭಟನೆ ಆರಂಭಗೊoಡಿದೆ. ಎತ್ತಿನಗಾಡಿಯಲ್ಲೇ ಕಾಂಗ್ರೆಸ್ ನಾಯಕರು ವಿಧಾನಸೌಧಕ್ಕೆ ತೆರಳಲಿದ್ದಾರೆ.
ಎತ್ತಿನಗಾಡಿ ಚಲೋ ಪ್ರತಿಭಟನೆಗೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದಂತಹ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾನು ದೇಶದ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಸರ್ಕಾರದಿಂದ ಪಿಕ್ ಪಾಕೆಟ್ ನಡೆಯುತ್ತಿದೆ. ನಮ್ಮ ಹೋರಾಟವು ನಿರಂತರವಾಗಿರಲಿದೆ. ತೈಲದ ಬೆಲೆ ಏರಿಕೆಯ ಬಗ್ಗೆ ಸದನದೊಳಗೂ ಚರ್ಚೆಯನ್ನು ಮಾಡುತ್ತೇವೆ ಎಂದು ಗುಡುಗಿದರು.