ಬೆಂಗಳೂರು: ರೇಪ್ ಆಗಿರುವುದು ಮೈಸೂರಿನಲ್ಲಿ. ಆದರೆ ಈ ಕಾಂಗ್ರೆಸ್ಸಿನವರು ನನ್ನ ರೇಪ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಬೇಜಾವಾಬ್ದಾರಿ ಹೇಳಿಕೆಯನ್ನು ನೀಡಿ ಇದೀಗ ವಿವಾದಕ್ಕೀಡಾಗಿದ್ದಾರೆ.
ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಕುರಿತು ಕಾಂಗ್ರೆಸ್ ನಿಂದ ಗೃಹ ಸಚಿವರ ರಾಜೀನಾಮೆಗೆ ಒತ್ತಾಯದ ವಿಚಾರಕ್ಕೆ ಪ್ರತಿಕ್ರಿಯಿಸಿದಂತಹ ಅವರು, ಕಾಂಗ್ರೆಸ್ಸಿನವರು ಗೃಹ ಸಚಿವರು ಅಂದರೆ ನನ್ನನ್ನ ರೇಪ್ ಮಾಡ್ತಿದ್ದಾರೆ. ನನ್ನ ರೇಪ್ ಮಾಡುವ ಪ್ರಯತ್ನವನ್ನು ಮಾಡುತ್ತಾ ಇದ್ದಾರೆ. ಇಂತಹ ವಿಚಾರದಲ್ಲಿ ಹೀಗೆ ಮಾಡೋದಕ್ಕೆ ಹೋಗಬಾರದು. ಇಂತಹ ಪ್ರಕರಣದಲ್ಲಿಯೂ ರಾಜಕೀಯ ಮಾಡಲು ಹೋಗಬಾರದು ಎಂದು ಹೇಳಿದ್ದಾರೆ.
ಯುವಕ, ಯುವತಿ 7.30 ಕ್ಕೆ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಆ ಸಮಯದಲ್ಲಿ ಆ ಜೋಡಿಗಳು ಅಲ್ಲಿ ಹೋಗಬಾರದಿತ್ತು. ಆದರೆ ಹೋಗಬೇಡಿ ಅಂತಾ ತಡೆಯೋದಕ್ಕೂ ಆಗೋದಿಲ್ಲ. ಸದ್ಯಕ್ಕೆ ಯುವಕ, ಯುವತಿ ಶಾಕ್ ನಲ್ಲಿ ಇದ್ದಾರೆ. ಅವರಿಂದ ಸಂಪೂರ್ಣ ಸ್ಟೇಟ್ ಮೆಂಟ್ ಪಡೆಯಲು ಆಗಿಲ್ಲ. ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮೊನ್ನೆ ಸಂಜೆ 7.30- 8 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಘಟನೆ ನಡೆದ 12 ಗಂಟೆ ಒಳಗೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಸಂತ್ರಸ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಅವರಿಗೆ ಉತ್ತಮ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಸಂತ್ರಸ್ತೆ ಶಾಕ್ ನಲ್ಲಿ ಇದ್ದಾರೆ. ಹೀಗಾಗಿ ಸಂಪೂರ್ಣ ಹೇಳಿಕೆಯನ್ನು ಪಡೆಯಲು ಆಗುತ್ತಿಲ್ಲ. ಆದರೂ ನಮ್ಮ ಪೋಲೀಸರು ಕೇಸ್ ನನ್ನು ದಾಖಲು ಮಾಡಿಕೊಂಡು ತನಿಖೆ ಮಾಡ್ತಿದ್ದಾರೆ. ಪ್ರಕರಣ ಟ್ರೇಸ್ ಮಾಡಲು ನಮ್ಮ ಅಧಿಕಾರಿಗಳು ಕೆಲಸವನ್ನು ಮಾಡುತ್ತಿದ್ದಾರೆ. ಬೆಂಗಳೂರಿನಿoದ ಹಿರಿಯ ಅಧಿಕಾರಿ ಪ್ರತಾಪ್ ರೆಡ್ಡಿಯನ್ನ ಕಳಿಸಲಾಗಿದೆ. ಈ ಪ್ರಕರಣವನ್ನು ಭೇದಿಸಲು ಇಲಾಖೆ ಅಧಿಕಾರಿಗಳು ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಮೈಸೂರು ಆಯುಕ್ತರು, ಪೊಲೀಸರು ಬೇರೆ ಬೇರೆ ತಂಡಗಳಾಗಿ ರಚನೆ ಮಾಡಿಕೊಂಡು ಗಂಭೀರ ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಮಾಹಿತಿಯನ್ನು ನೀಡಿದರು.