ನವದೆಹಲಿ: 75ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಕಾಂಗ್ರೆಸ್ ಪಕ್ಷವು ವರ್ಷಪೂರ್ತಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧಾರಮಾಡಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿ ಕಾರ್ಯದರ್ಶಿಗಳು, ರಾಜ್ಯ ಘಟಕಗಳ ಅಧ್ಯಕ್ಷರ ಸಭೆಯಲ್ಲಿ ಈ ವಿಷಯದ ಬಗ್ಗೆ ತೀರ್ಮಾನಿಸಲಾಗಿದೆ.
ಬಿಜೆಪಿಯ ಪಕ್ಷದವರು ರಾಷ್ಟ್ರಕ್ಕೆ ಮತ್ತು ಸಂವಿಧಾನಕ್ಕೆ ಯಾವ ರೀತಿಯಲ್ಲಿ ಬೆದರಿಕೆಯನ್ನು ನೀಡುತ್ತಾರೆ ಎಂಬುದನ್ನು ನಾವು ಜನರಿಗೆ ಹೇಳಬೇಕಾಗಿದೆ, ಸ್ವಾತಂತ್ರ‍್ಯ ಹೋರಾಟಗಾರರು ಮತ್ತು ಸ್ವಾತಂತ್ರ‍್ಯ ಹೋರಾಟದ ತ್ಯಾಗವನ್ನು ನಾವು ನಮ್ಮ ಯುವ ಪೀಳಿಗೆಗೆ ಹೇಳಬೇಕಾಗಿದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಯವರು ಮಾತನಾಡಿ, ಆಗಸ್ಟ್ 14 ರಿಂದ ಕಾರ್ಯಕ್ರಮಗಳು ಆರಂಭವಾಗಲಿದೆ. ಸ್ವಾತಂತ್ರ‍್ಯ ಹೋರಾಟವನ್ನು ಎತ್ತಿ ಹಿಡಿಯಲು ರಾಜ್ಯದ ವಿವಿಧ ಭಾಗಗಳಲ್ಲಿ ನಾವು 52 ವಾರಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ.
ಸ್ವಾತಂತ್ರ‍್ಯ ಹೋರಾಟಗಾರರ ಕುಟುಂಬಗಳನ್ನು ಗೌರವಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಸ್ವಾತಂತ್ರ‍್ಯದ ಸಂದೇಶವನ್ನು ನಮ್ಮ ಪಕ್ಷದ ಕಾರ್ಯಕರ್ತರು ಸಾರುತ್ತಾರೆ. ಶಾಲಾ -ಕಾಲೇಜುಗಳಲ್ಲಿ ಸೆಮಿನಾರ್‌ಗಳನ್ನು ನಡೆಸುವುದು ಮತ್ತು ಕರ್ನಾಟಕದ ಸ್ವಾತಂತ್ರ‍್ಯ ಹೋರಾಟಗಾರರ ಪಾತ್ರವನ್ನು ಎತ್ತಿ ತೋರಿಸುವ ವಿಡಿಯೋಗಳನ್ನು ಪ್ರದರ್ಶಿಸುವುದು ಮತ್ತು ಅವರ ಮೌಲ್ಯಗಳು ಮತ್ತು ತತ್ವಗಳ ಬಗ್ಗೆ ಮಾತನಾಡುವ ಮೂಲಕ ಸ್ವಾತಂತ್ರ‍್ಯದ ಸಂದೇಶವನ್ನು ಸಾರಲಿದ್ದಾರೆಂದು ಹೇಳಿದ್ದಾರೆ.
ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ರಾಮಲಿಂಗಾ ರೆಡ್ಡಿಯವರು ಮಾತನಾಡಿ, ಸಂವಿಧಾನ ಆಧಾರಿತ ವ್ಯವಸ್ಥೆಗಳನ್ನು ದುರ್ಬಲಗೊಳಿಸುವ ಶಕ್ತಿಗಳಿಂದ ನಾವು ದೇಶವನ್ನು ರಕ್ಷಿಸಬೇಕು ಎಂದು ತಿಳಿಸಿದ್ದಾರೆ.