ಬೆಂಗಳೂರು: ನಾನು ಅದೃಷ್ಟವಂತ ಮುಖ್ಯಮಂತ್ರಿ, ಇದೇ ಖಾತೆ ಬೇಕೆಂದು ಯಾವ ಸಚಿವರು ನನಗೆ ಒತ್ತಡವನ್ನು ಹಾಕುತ್ತಿಲ್ಲ, ಗಂಟೆಯೊಳಗೆ ಖಾತೆ ಹಂಚಿಕೆ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಆರ್.ಟಿ. ನಗರದಲ್ಲಿರುವ ತರಳುಬಾಳು ಮಠಕ್ಕೆ ಶನಿವಾರ ತೆರಳಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಬೊಮ್ಮಾಯಿ, ಯಾರೂ ಯಾವುದೇ ಖಾತೆಗೂ ಪಟ್ಟು ಹಿಡಿದಿಲ್ಲ. ನಾನು ಅದೃಷ್ಟವಂತ ಮುಖ್ಯಮಂತ್ರಿ. ಸಚಿವ ಸಂಪುಟದವರು ಯಾರೂ ಪ್ರಭಾವ ಬೀರಿಲ್ಲ. ಕೆಲವರು ಇಂಥ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿದ್ದಾರೆಯೇ ಹೊರತು ಯಾರ ಒತ್ತಡವೂ ಇಲ್ಲ ಎಂದು ಹೇಳಿದ್ದಾರೆ.
ಕೋವಿಡ್ ಸಭೆಯ ಬಳಿಕ ವಚನಾನಂದ ಸ್ವಾಮೀಜಿ ಭೇಟಿ ಮತ್ತು ಸಿದ್ದಗಂಗಾ ಮಠಕ್ಕೆ ತೆರಳಿ ರಾತ್ರಿ ತಡವಾಗಿ ಬಂದೆ. ಹೀಗಾಗಿ, ಖಾತೆ ಹಂಚಿಕೆ ಸಾಧ್ಯ ಆಗಿಲ್ಲ. ರಾತ್ರಿ ತಡವಾಗಿ ಖಾತೆ ಹಂಚಿಕೆ ಮಾಡಬೇಡಿ ಎಂದು ಕೆಲವು ಸಲಹೆ ನೀಡಿದರು. ಹೀಗಾಗಿ ಮಾಡಿಲ್ಲ ಎಂದು ಸಮರ್ಥನೆಯನ್ನು ನೀಡಿದರು.