ಬೆಂಗಳೂರು; ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ 2 ವರ್ಷಗಳಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್’ನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮೊದಲಿಗೆ ಯಡಿಯೂರಪ್ಪ ಅವರು ಬಿಜೆಪಿ ಸಾಧನೆ ಕುರಿತು ಮಾತನಾಡಿದರು. ಶಿಕಾರಿಪುರದಿಂದ ಬಿಜೆಪಿಯೊಂದಿಗೆ ನಾನು ಬಂದಿದ್ದೇನೆ. ಶಿಕಾರಿಪುರದಲ್ಲಿ ಸಂಘದ ಪ್ರಚಾರಕನಾಗಿ ಕಾರ್ಯ ನಿರ್ವಹಿಸಿ, ಚುನಾವಣೆಯಲ್ಲಿ ಗೆದ್ದು, ಘಟಕದ ಅಧ್ಯಕ್ಷನಾಗಿ, ವಿಧಾನ ಸಭಾ ವಿಪಕ್ಷ ನಾಯಕನಾಗಿ, ಮುಖ್ಯಮಂತ್ರಿಯಾಗಿ ಪಕ್ಷದ ಬೇರೆ ಬೇರೆ ಹುದ್ದೆಗಳಲ್ಲಿ ಕೆಲಸ ಮಾಡಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ ಎಂಬ ತೃಪ್ತಿಯು ನನಗಿದೆ ಎಂದು ಹೇಳಿದರು.
ಶಿಕಾರಿಪುರದ ಜನ ನನ್ನನ್ನು ಏಳು ಬಾರಿ ಆಯ್ಕೆ ಮಾಡಿದ್ದಾರೆ. ರಾಷ್ಟ್ರೀಯ ನಾಯಕರು ಸಹ ನನ್ನನ್ನು ಬೆಂಬಲಿಸಿದ್ದಾರೆ. ಬಿಜೆಪಿ ನೀಡಿದ ಸ್ಥಾನಕ್ಕೆ, ಅವಕಾಶಕ್ಕೆ ನಾನು ಎಂದಿಗೂ ಋಣಿಯಾಗಿರುತ್ತೇನೆ ಎಂದು ತಿಳಿಸಿದರು.
75 ವರ್ಷ ದಾಟಿದ ಬಳಿವೂ ನನಗೆ ಎರಡು ವರ್ಷ ಸಿಎಂ ಆಗಿ ಮುಂದುವರೆಯಲು ಅವಕಾಶ ನೀಡಿರುವಂತಹ ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರಿಗೆ ಕೇವಲ ಶಬ್ದಗಳಲ್ಲಿ ಧನ್ಯವಾದ ಹೇಳಲು ಆಗುವುದಿಲ್ಲ.
ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲದ ಸಮಯದಲ್ಲಿ ನಾನು ಏಕಾಂಗಿ ಹೋರಾಟವನ್ನು ಮಾಡಿ ಪಕ್ಷವನ್ನು ಇಂದು ಅಧಿಕಾರಕ್ಕೆ ತರುವಲ್ಲಿ ಸಫಲನಾಗಿದ್ದೇನೆ,
ನಾನು ಪಕ್ಷದಲ್ಲಿ ನೀಡಿದಂತಹ ಸೇವೆಯನ್ನು ಗಮನಿಸಿದ ಅಟಲ್ ಬಿಹಾರಿ ವಾಜಪೇಯಿ ಅವರು ಕೇಂದ್ರದಲ್ಲಿ ಸಚಿವನಾಗು ಎಂದು ನನಗೆ ಸೂಚಿಸಿದ್ದರು . ಆದರೆ ನಾನು ರಾಜ್ಯದಲ್ಲಿ ನಮ್ಮ ಪಕ್ಷವನ್ನು ಕಟ್ಟಬೇಕು ಎಂದು ನಿರ್ಧರಿಸಿ ಅದನ್ನು ನಿರಾಕರಿಸಿದೆ ಎಂದು ಹೇಳಿದರು.
ಬಳಿಕ ಭಾಷಣದ ವೇಳೆ ಭಾವುಕರಾದ ಯಡಿಯೂರಪ್ಪ ಅವರು ರಾಜ್ಯದ ಜನತೆಗೆ ತಾವು ಯಾರೂ ಅನ್ಯತಾ ಭಾವಿಸಬಾರದು, ನಾನು ನಿಮ್ಮೆಲ್ಲರ ಅಪ್ಪಣೆ ಪಡೆದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದೇನೆ. ಮಧ್ಯಾನ್ಹ ಊಟದ ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸುತ್ತೇನೆಂದು ಹೇಳಿದರು.